ಗೋಣಿಕೊಪ್ಪಲು, ಫೆ. 10: ರೈತರ ವಿವಿಧ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ರೈತ ಮುಖಂಡರ ನಿಯೋಗ ತೆರಳಿ ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾದ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಿಲ್ಲೆಯ ರೈತರು ತಮ್ಮ ಗದ್ದೆಗÀಳಲ್ಲಿ ಬೆಳೆದ ಭತ್ತದ ಒಣ ಹುಲ್ಲನ್ನು ತಮ್ಮ ಕಣಗಳಲ್ಲಿ ಶೇಖರಿ ಸಿಟ್ಟಿದ್ದು, ಇವುಗಳನ್ನು ವಿಲೇವಾರಿ ಮಾಡಲು ಕಾನೂನಿನ ತೊಡಕಿದ್ದು ಇದನ್ನು ತಕ್ಷಣವೇ ಸಡಿಲಗೊಳಿಸುವ ಮೂಲಕ ಇತರ ರಾಜ್ಯಗಳಿಗೆ ಒಣ ಹುಲ್ಲನ್ನು ರೈತರು ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಕಣ್ಮಣಿ ಜಾಯ್‍ರವರನ್ನು ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾಧಿಕಾರಿಗಳು ರೈತ ಸಂಘದ ಮನವಿಗೆ ಸ್ಪಂದಿಸಿ ಹಿಂದಿನ ಜಿಲ್ಲಾಧಿಕಾರಿಗಳ ಅವಧಿಯಲ್ಲಿ ಹೊರ ರಾಜ್ಯಗಳಿಗೆ ಹುಲ್ಲನ್ನು ಮಾರಾಟ ಮಾಡಲು ನಿರ್ಭಂದ ಹೇರಲಾಗಿದೆ. ಇದು ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಿದೆ. ಆದುದರಿಂದ ಇದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕಳೆದ ಕೆಲವು ತಿಂಗಳ ಹಿಂದೆ ಕೊಡಗಿನಿಂದ ಕೇರಳಕ್ಕೆ ಒಣ ಹುಲ್ಲು ಸಾಗಾಟ ಮಾಡದಂತೆ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು. ನ್ಯಾಯಾಲಯದ ಆದೇಶ ಪ್ರತಿ ತಲಪಿ ಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ನಂತರ ಜಿಲ್ಲಾಧಿಕಾರಿಗಳಿಗೆ ತಡೆಯಾಜ್ಞೆ ಪ್ರತಿಯನ್ನು ನೀಡಲಾಯಿತು. ತಾಲೂಕು ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ಹಾಗೂ ರೈತ ಮುಖಂಡರುಗಳ ಸಭೆ ಆಯೋಜಿಸುವ ಮೂಲಕ ರೈತರ ಸಮಸ್ಯೆಗಳನ್ನು ಆಲಿಸುವ ಪ್ರಯತ್ನವಾಗಿ ತಾಲೂಕು ಮಟ್ಟದ ಸಭೆ ನಡೆಸುವಂತೆ ರೈತ ಮುಖಂಡರು ಮನವಿ ಮಾಡಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಜನಸಂಪರ್ಕ ಸಭೆ ನಡೆಸುವ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲಾಗುವದು. ಈ ಸಭೆಗೆ ರೈತ ಮುಖಂಡರುಗಳನ್ನು ಆಹ್ವಾನಿಸಲಾಗುವದು ಎಂದರು.

ಜಿಲ್ಲಾಧಿಕಾರಿ ಭೇಟಿಯ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಶುಭಾಶ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಖಜಾಂಚಿ ತೀತಿರ ಸಭಿತ, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಮುಖಂಡರಾದ ಮಂಡೇಪಂಡ ಪ್ರವೀಣ್, ಕೋದೇಂಗಡ ಸುರೇಶ್ ಚಂಗಪ್ಪ, ಗಾಡಂಗಡ ಉತ್ತಯ್ಯ, ಸದಸ್ಯರಾದ ಎಂ.ಬಿ. ಅಶೋಕ್, ಎಂ.ಬಿ. ಹರೀಶ್, ಹೆಚ್.ಕೆ. ದಿನೇಶ್, ಡಿಕ್ಕಿ, ಪ್ರಕಾಶ್, ಸಾಗರ್, ಹೆಚ್.ಎಂ. ಸ್ವಾಮಿ, ರಾಮು, ಸಣ್ಣಪ್ಪ, ಪುರುಷೊತ್ತಮ್, ಬಸವರಾಜು, ವಸಂತ ಮುಂತಾದವರು ಹಾಜರಿದ್ದರು.