ವೀರಾಜಪೇಟೆ, ಫೆ. 10: ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸಾಂಪ್ರದಾಯಿಕ ದಿನ’ವನ್ನು ಮೂರು ದಿನಗಳವರೆಗೆ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಆಚರಿಸಿದರು.

ಮೊದಲ ದಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಮಹಿಳಾ ಅಧ್ಯಾಪಕರು ಬಿಳಿ ಬಣ್ಣದ ಉಡುಪುಗಳನ್ನು ಧರಿಸಿದರೆ ಎರಡನೇ ದಿನ ಹಸಿರು ಬಣ್ಣದ ಉಡುಗೆಗಳನ್ನು ಧರಿಸಿ ಕೊಡಗು ಸಮೃದ್ಧಿಯಾಗಿ ಮುಂದುವರೆಯಲಿ ಎಂಬ ಸಂದೇಶ ಸಾರಿದರು. ಮೂರನೇ ದಿನ ಕೊಡವರ ಸಾಂಪ್ರದಾಯಿಕ ಸಂದೇಶ ಸಾರಿದರು. ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದರೂ ಎಲ್ಲಾ ಕಷ್ಟಗಳನ್ನು ದೂರ ಮಾಡಿ ಮತ್ತೆ ಕೊಡಗನ್ನು ಎತ್ತರಕ್ಕೆ ಬೆಳೆಸೋಣ ಎಂಬಂತೆ, ವಿದ್ಯಾರ್ಥಿಗಳು ತಮ್ಮ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಉಡುಗೆಗಳನ್ನು ಧರಿಸುವ ಮೂಲಕ ಭಾರತಿಯರು ಒಂದೇ ಎಂಬ ಸಂದೇಶವನ್ನು ಸಾರಲಾಯಿತು.

ಸಾಂಪ್ರದಾಯಿಕ ದಿನಗಳನ್ನು ಆಚರಿಸುವ ಸಂದರ್ಭ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಕೆ. ಬೋಪಯ್ಯ, ಸಾಂಸ್ಕøತಿಕ ಸಮಿತಿಯ ಸಂಚಾಲಕರಾದ ಪಿ.ಎನ್. ನಾಗರಾಜ್ ಮೂರ್ತಿ, ವೇಣುಗೋಪಾಲ್, ಸುಸ್ಮಿತಾ ಹಾಗೂ ಎಲ್ಲಾ ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.