ಸುಂಟಿಕೊಪ್ಪ, ಫೆ. 9: ಕೊಡಗು ಜಿಲ್ಲಾ ಪ್ರವಾಸಕ್ಕೆಂದು ಬಂದಿದ್ದ ಟಿ.ಟಿ. ವ್ಯಾನ್‍ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ದುರ್ಮರಣಕ್ಕೊಳ ಗಾಗಿರುವ ಘಟನೆ ವರದಿಯಾಗಿದೆ. ಮೂಲತಃ ಮೈಸೂರಿನ ನಿವಾಸಿ, ಗಾರೆ ಕೆಲಸದವನಾಗಿದ್ದ ಬಸವ ಎಂಬಾತನೇ ಅವಘಡದಲ್ಲಿ ಇಹಲೋಕ ತ್ಯಜಿಸಿದವನಾಗಿದ್ದಾನೆ.ಈತ ಸುಂಟಿಕೊಪ್ಪ ಹಾಗೂ ಇನ್ನಿತರ ಕಡೆಗಳಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಮಧ್ಯಾಹ್ನ 1.30ರ ಸಮಯದಲ್ಲಿ ಸಹಕೆಲಸದವನಾದ ಸುಬ್ಬಣ್ಣ ಎಂಬವರನ್ನು (ಕೆ.ಎ. 55 ವಿ 0016) ಬೈಕ್‍ನ ಹಿಂಬದಿಯಲ್ಲಿ ಕೂರಿಸಿ ಕೊಂಡು ಸುಂಟಿಕೊಪ್ಪದಿಂದ ಕುಶಾಲನಗರ ಸಮೀಪದ ಗಂಧದಕೋಟೆಗೆ ತೆರಳುತ್ತಿದ್ದ. ಇದೇ ಸಂದರ್ಭದಲ್ಲಿ(ಮೊದಲ ಪುಟದಿಂದ) ಕೊಡಗು ಜಿಲ್ಲಾ ಪ್ರವಾಸಕ್ಕೆಂದು ಬಂದಿದ್ದ ಕಾಸರಗೂಡು ಜಿಲ್ಲೆಯ ಮುಳ್ಳೇರಿಯಾದ (ಕೆ.ಎಲ್. 11 ಎಜಿ 7011) ಟಿ.ಟಿ. ವ್ಯಾನ್ ಗೋಲ್ಡನ್ ಟೆಂಪಲ್ ವೀಕ್ಷಿಸಿ ಮಡಿಕೇರಿಯತ್ತ ಬರುತ್ತಿದ್ದಾಗ ಶಾಂತಿಗಿರಿ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದ ಬೈಕ್, ಟಿ.ಟಿ. ವ್ಯಾನ್‍ಗೆ ಡಿಕ್ಕಿಯಾಗಿದೆ. ಕೆಳಗೆ ಬಿದ್ದ ಬಸವ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಟಿ.ಟಿ. ವ್ಯಾನಿನ ಚಾಲಕ ರಜಾಕ್ ಎಂಬಾತ, ಬೈಕ್‍ಗೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಯತ್ನಿಸಿದ್ದು, ಈ ವೇಳೆ ನಿಯಂತ್ರಣ ಕಳೆದುಕೊಂಡ ವ್ಯಾನ್ ಹೆದ್ದಾರಿಗೆ ಹೊಂದಿಕೊಂಡಿರುವ ತೋಟದ ಬೇಲಿ ಬದಿಯ ದೊಡ್ಡದಾದ ಜಾಹೀರಾತು ಫಲಕಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ವ್ಯಾನಿನಲ್ಲಿದ್ದ 12 ಮಂದಿ ಹಾಗೂ ಬೈಕ್‍ನ ಹಿಂಬದಿ ಸವಾರ ಯಾವದೇ ಗಾಯಕ್ಕೊಳಗಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಸವಾರ ಮದ್ಯಪಾನ ಮಾಡಿ ಅತೀ ವೇಗದಿಂದ ಬೈಕ್ ಅನ್ನು ಚಾಲಿಸುತ್ತಿದ್ದುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ಮುರಳೀಧರ ಮತ್ತು ಠಾಣಾಧಿಕಾರಿ ಜಯರಾಂ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಶಾಲನಗರ ಆಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ.