ಶನಿವಾರಸಂತೆ, ಫೆ. 8: ತುಮಕೂರಿನ ಸಿದ್ಧಗಂಗಾ ಮಠದ ಸಂತ ಪರಂಪರೆಯಲ್ಲಿ ಅಪರೂಪವಾಗಿದ್ದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದರೂ ಎಂದೆಂದೂ ಸಂತರಿಗೆ ಮಾರ್ಗದರ್ಶಕರಾಗಿರುತ್ತಾರೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗುಡುಗಳಲೆ ಜಾತ್ರಾ ಮೈದಾನದಲ್ಲಿ ನಡೆದ ಲಿಂಗೈಕ್ಯ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಶ್ರೀಗಳು ಬಸವಣ್ಣನವರ ತತ್ವ-ಆದರ್ಶಗಳನ್ನು ಪಾಲಿಸಿ ಸಮಾಜದ ಏಳಿಗೆಗೆ ಶ್ರಮಿಸಿದರು. ಸಮಾಜ ಹಾಗೂ ಶಿಕ್ಷಣದ ಮಹಾನ್ ಸುಧಾರಕರಾಗಿದ್ದರು. ಈ ಶತಮಾನದ ಸಂತರಿಗೆ ಸಂತರಾಗಿ ಸಮಾಜಕ್ಕೆ ಮುಡಿಪಾಗಿದ್ದವರು. ಅನ್ನ, ಅಕ್ಷರ ದಾಸೋಹದ ಮೂಲಕ ಮಠವನ್ನು ಸಮಾಜದ ಏಳಿಗೆಗೆ ಮುಡಿಪಾಗಿಟ್ಟವರು ಎಂದು ಸ್ಮರಿಸಿದರು.

ಸಿದ್ಧಗಂಗಾ ಮಠ ಜಾತಿ-ಧರ್ಮವನ್ನು ಮೀರಿ ನಿಂತಿದ್ದು, ಸರ್ವಜನಾಂಗ ಹಾಗೂ ಸರ್ವ ಧರ್ಮದವರೂ ಬೇಧ-ಭಾವವಿಲ್ಲದೆ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಕಲ್ಲುಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಸಿದ್ಧಗಂಗಾ ಶ್ರೀ ತಾಯಿ ಕರುಳಿನ ಹೃದಯವಂತರಾಗಿದ್ದರು. ಎಲ್ಲಾ ಮಕ್ಕಳು ವಿದ್ಯಾವಂತರಾಗಬೇಕು ಎಂಬ ದೃಷ್ಟಿಯಿಂದಲೇ ಅಕ್ಷರ ದಾಸೋಹವನ್ನು ಸ್ಥಾಪಿಸಿ ಲಕ್ಷಾಂತರ ಮಕ್ಕಳ ಹಸಿವು ನೀಗಿಸಿ ಅಕ್ಷರಜ್ಞಾನ ನೀಡಿದ ಪುಣ್ಯಪುರುಷರಾಗಿದ್ದಾರೆ ಎಂದರು.

ಗುಡುಗಳಲೆ ಜಾಮೀಯಾ ಮಸೀದಿ ಅಧ್ಯಕ್ಷ ಜುಬೇರ್ ಮಾತನಾಡಿ, ಮಾನವ ಧರ್ಮವೇ ಶ್ರೇಷ್ಠ ಎಂದು ಪ್ರತಿಪಾದಿಸಿದ ಶಿವಕುಮಾರ ಸ್ವಾಮೀಜಿ ಸಮಾಜ ಸುಧಾರಕರಾಗಿದ್ದರು ಎಂದರು. ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸೋಮವಾರಪೇಟೆ ವಿರಕ್ತ ಮಠ ವಿಶ್ವೇಶ್ವರ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ತೊರೆನೂರು ಮಠದ ಮಹೇಶ ಸ್ವಾಮೀಜಿ, ಶಿಡಿಗಳಲೆ ಮಠದ ಮಹಾಂತ ಸ್ವಾಮೀಜಿ ಭಾಗಿಯಾಗಿದ್ದರು. ಸೋಮವಾರಪೇಟೆ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಹಾಲಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಪ್ರಮುಖರಾದ ಎಸ್.ಎಂ. ಉಮಾಶಂಕರ್, ಹೆಚ್.ಎಸ್. ಪ್ರೇಮನಾಥ್, ಜಾತ್ರಾ ಸಮಿತಿ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.