ಗೋಣಿಕೊಪ್ಪ ವರದಿ, ಫೆ. 7: ಮೌಲ್ಯಮಾಪನ ಮಾಡುವವರಿಗೆ ಅರ್ಥವಾಗುವಂತೆ ಪರೀಕ್ಷೆ ಬರೆಯುವ ಮೂಲಕ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಆರ್. ಎ. ಚೇತನ್‍ರಾಮ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ಪೊನ್ನಂಪೇಟೆ ಜೆಸಿಐ ನಿಸರ್ಗ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ಅನುದಾನಿತ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸು ವದು ಹೇಗೆ ಎಂಬ ಪರೀಕ್ಷಾಪೂರ್ವ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ಎಲ್ಲಾರಿಗೂ ಅರ್ಥವಾಗುವಂತೆ ಬರೆಯುವ ಅಭ್ಯಾಸ ಮಾಡಿಕೊಳ್ಳುವ ಮೂಲಕ ಮೌಲ್ಯಮಾಪನ ಸಂದರ್ಭ ಉತ್ತಮ ಅಂಕ ಗಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಬೇಕು ಎಂದರು.

ಪರೀಕ್ಷಾಪೂರ್ವ ಸಮಯದಲ್ಲಿನ ಅಧೈರ್ಯದಿಂದಲೇ ಹೆಚ್ಚು ವಿದ್ಯಾರ್ಥಿಗಳು ಅಂಕಗಳಿಸಲು ಸಾಧ್ಯವಾಗದೆ ತೊಂದರೆಯಲ್ಲಿ ಸಿಲುಕಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಿದಾಗ ಮಾನಸಿಕ ಒತ್ತಡ ದೂರವಾಗಿ ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಒತ್ತಡ, ಅಧೈರ್ಯದಿಂದ ಹೊರಬರಬೇಕು ಎಂದರು.

ಪರೀಕ್ಷೆಗೆ ಪೂರಕವಾಗಿ ಆರೋಗ್ಯ ಕಾಪಾಡಿಕೊಳ್ಳುವದು ಮುಖ್ಯವಾಗು ತ್ತದೆ. ಆಹಾರ ,ನೀರು ಸೇವನೆ ಬಗ್ಗೆ ಕಾಳಜಿ ಅವಶ್ಯ. ಬೇಸಿಗೆಯಲ್ಲಿ ವೈರಸ್, ಬ್ಯಾಕ್ಟೀರಿಯಾ ಹೆಚ್ಚಿರುವದರಿಂದ ನೀರಿನ ಮೂಲಕ ಹರಡುವ ರೋಗಗಳಿಂದ ರಕ್ಷಿಸಿಕೊಳ್ಳಲು ಬಿಸಿ ನೀರು ಸೇವನೆಗೆ ಆಧ್ಯತೆ ನೀಡಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬಾಳಗಿ ಮಾತನಾಡಿ, ಪಾಲಕರು ಅನುಭವಿಸುವ ತೊಂದರೆಯನ್ನು ಪರೀಕ್ಷೆ ಸಂದರ್ಭ ಮಕ್ಕಳು ಮನಸ್ಸಿನಿಂದ ದೂರವಿಡು ವದು ಒಳ್ಳೆಯದು. ಇದರಿಂದ ಮಕ್ಕಳಲ್ಲಿ ಒತ್ತಡ ಹೆಚ್ಚಾಗುವದರಿಂದ ಆತ್ಮವಿಶ್ವಾಸ ಕಳೆದುಕೊಳ್ಳುವಂತಾಗುತ್ತಿದೆ. ಇದು ಅಂಕ ಪರೀಕ್ಷೆ ಸಂದರ್ಭ ಋಣಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ ಎಂದರು.

ತಾಲೂಕಿನ ಗೋಣಿಕೊಪ್ಪ ಲಯನ್ಸ್, ಸರ್ವದೈವತಾ ಶಾಲೆ, ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆ, ಅನುದಾನಿತ ಶಾಲೆ, ಗೋಣಿಕೊಪ್ಪ ಸೆಂಟ್ ಥೋಮಸ್, ಪೊನ್ನಂಪೇಟೆ ಸೆಂಟ್ ಆಂಥೋನಿ, ಅಪ್ಪಚ್ಚಕವಿ, ಸಾಯಿಶಂಕರ್ ಶಾಲೆಗಳಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭ ಪೊನ್ನಂಪೇಟೆ ಜೆಸಿಐ ನಿಸರ್ಗ ಸಂಸ್ಥೆ ಅಧ್ಯಕ್ಷೆ ಶೀಲಾ ಬೋಪಣ್ಣ, ಮುಖ್ಯಶಿಕ್ಷಕ ರತೀಶ್‍ರೈ, ಜೆಸಿಐ ಸಂಸ್ಥೆ ಪದಾಧಿಕಾರಿಗಳಾದ ಬಿ.ಇ. ಕಿರಣ್, ವಿನೋದ್, ಬಿಆರ್‍ಸಿ ಉತ್ತಪ್ಪ, ಇಸಿಒ ಅಯ್ಯಪ್ಪ ಉಪಸ್ಥಿತರಿದ್ದರು. -ಸುದ್ದಿಪುತ್ರ