ನಾಪೋಕ್ಲು, ಫೆ. 7: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮ ನಡೆಯಿತು.

ಬಲ್ಲಮಾವಟಿ ಸಮುದಾಯ ಭವನದಲ್ಲಿ ಶ್ರೀ ಭಗವತಿ ಜ್ಞಾನ ವಿಕಾಸ ಕೇಂದ್ರದ ಸೃಜನಶೀಲ ಕಾರ್ಯಕ್ರಮದಲ್ಲಿ ಮಧ್ಯವಯಸ್ಸಿನ ಮಹಿಳೆಯರ ಸಮಸ್ಯೆಗಳು ಮತ್ತು ಪರಿಹಾರೋಪಾಯ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ ಉದ್ಘಾಟಿಸಿದರು.

ಜ್ಞಾನ ವಿಕಾಸ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಿದೆ. ಕೇಂದ್ರದಲ್ಲಿ ತೊಡಗಿಸಿಕೊಂಡ ಮಹಿಳೆಯರು ಪ್ರತಿಯೊಂದು ವಿಚಾರಗಳನ್ನು ಬಹಳ ಬೇಗ ಅರ್ಥಮಾಡಿ ಕೊಳ್ಳಬಲ್ಲವರಾಗಿದ್ದಾರೆ ಎಂದರು.

ಸಂಪನ್ಮೂಲ ವ್ಯಕ್ತಿ ಆರೋಗ್ಯ ಕೇಂದ್ರದ ನಿವೃತ್ತ ಅಧಿಕಾರಿ ಡಿ.ಟಿ. ಕೃಷ್ಣ ಮಧ್ಯವಯಸ್ಸಿನ ಮಹಿಳೆಯರನ್ನು ಕಾಡುವ ಆರೋಗ್ಯ ಮತ್ತು ಅದಕ್ಕೆ ಚಿಕಿತ್ಸೆ ಪಡೆಯುವ ವಿವರಗಳ ಕುರಿತು ಮಾಹಿತಿ ನೀಡಿದರು. 40 ವರ್ಷ ಮೇಲ್ಪಟ್ಟ 60 ವರ್ಷಗಳವರೆಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳು ಮತ್ತು ಕಾಯಿಲೆಗಳು ಲಕ್ಷಣಗಳ ಕುರಿತು ವಿವರವಾದ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ಚೇತನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಮನ್ವಯಾಧಿ ಕಾರಿ ಜಯಂತಿ ಕೇಂದ್ರದ ವಾರ್ಷಿಕ ಶ್ರೇಣಿಕರಣದ ಕುರಿತು ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಜಾನಕಿ ವಹಿಸಿದ್ದರು. ಸೇವಾ ಪ್ರತಿನಿಧಿ ಪೊನ್ನಮ್ಮ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ರುಕ್ಮಿಣಿ ಸ್ವಾಗತಿಸಿ, ವಂದಿಸಿದರು.