ಮಡಿಕೇರಿ, ಫೆ. 7: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸ್ಟಡಿ ಸರ್ಕಲ್ ಕಾರ್ಯ ಕ್ರಮದಡಿ ಕೇಂದ್ರ ಲೋಕಸೇವಾ ಆಯೋಗದವರು ಜೂನ್-2019ರ ಮಾಹೆಯಲ್ಲಿ ನಡೆಸಲಿರುವ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ ತಾ. 15 ರಿಂದ 27 ರವರೆಗೆ ಮಡಿಕೇರಿಯಲ್ಲಿ ನಡೆಯಲಿದೆ. ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿದಿನ ಮಧ್ಯಾಹ್ನ 3.30 ರಿಂದ ಸಂಜೆ 6.30 ರವರೆಗೆ ಹಾಗೂ ರಜಾ ದಿನಗಳಂದು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ನಡೆಯಲಿದೆ.
ಪರೀಕ್ಷಾ ಪೂರ್ವ ತರಬೇತಿಯಲ್ಲಿ ಕೇಂದ್ರ ಲೋಕಸೇವಾ ಆಯೋಗದ ವರು ನಿಗದಿಪಡಿಸಿರುವ ಪಠ್ಯಕ್ರಮಕ್ಕೆ ಅನುಗುಣವಾಗಿ ಗುಣಮಟ್ಟದ ತರಬೇತಿ ನೀಡಲಾಗುವದು. ಪರೀಕ್ಷಾ ಪೂರ್ವ ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಖುದ್ದಾಗಿ ಅಥವಾ ಅಂಚೆ ಕಾರ್ಡಿನ ಮುಖಾಂತರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿ ಸಿಕೊಳ್ಳುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿ ಕಾರಿ ತಿಳಿಸಿದ್ದಾರೆ.