ಸುಂಟಿಕೊಪ್ಪ, ಫೆ. 7: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಗೋದಾಮು ಕಟ್ಟಡದ ಬೀಗ ಒಡೆದು ದುಷ್ಕರ್ಮಿಗಳು ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿ ದಾಂಧಲೆ ನಡೆಸಿದ್ದಾರೆ.
ರಾತ್ರಿ ವೇಳೆ ಪುಂಡಪೋಕರಿಗಳು ಶಾಲೆಯ ಆವರಣದಲ್ಲಿ ಸಿಗರೇಟು ಬೀಡಿ ಮದ್ಯ ಗಾಂಜಾ ಸೇವಿಸಿ ಖಾಲಿ ಬಾಟಲಿ ಸಿಗರೇಟು ಪ್ಯಾಕ್ ತುಂಡುಗಳನ್ನು ಎಸೆದು ವಿದ್ಯಾದೇಗುಲಕ್ಕೆ ಅಪಚಾರ ನಡೆಸುತ್ತಿರುವದು ಮಾಮೂಲಿಯಾಗಿದೆ. ಶಾಲೆಯ ವಿದ್ಯಾರ್ಥಿಗಳು ಬೆಳಗ್ಗಿನ ಜಾವ ಈ ನಿರುಪಯುಕ್ತ ವಸ್ತುಗಳನ್ನು ಶುಚಿಗೊಳಿಸುವಂತಾಗಿದೆ ಎಂದು ಮುಖ್ಯೋಪಾದ್ಯಾಯನಿ ಗೀತಾ ದೈಹಿಕ ಶಿಕ್ಷಣ ಶಿಕ್ಷಕ ನಂದ ತಿಳಿಸಿದ್ದಾರೆ.
ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದ ನಂತರ ಶಾಲಾ ಕೊಠಡಿಗಳಿಗೆ ಅಳವಡಿಸಿದ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆಯೂ ನಡೆದಿತ್ತು.
ತಾ.6 ರಂದು ಶಾಲೆಯ ಗೋದಾಮು ಕಟ್ಟಡ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಕಪಾಟಿನಲ್ಲಿದ್ದ ವಸ್ತುಗಳು, ಹಳೆ ಕಂಪ್ಯೂಟರ್, ಆಟೋಟದ ಸಾಮಗ್ರಿಗಳು, ವ್ಯಾಯಾಮದ ಪರಿಕರವನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸರಿಗೆ ಮುಖ್ಯೋಪಾಧ್ಯಾಯರು ದೂರು ನೀಡಿ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.