*ಗೋಣಿಕೊಪ್ಪಲು, ಫೆ. 5: ಭಾರತ ದೇಶಕ್ಕೆ ಮೋದಿ ಸರ್ಕಾರ ನೀಡಿದ ಯೋಜನೆಗಳ ಬಗ್ಗೆ ಜನರಲ್ಲಿಗೆ ತಲಪಿಸುವ ವ್ಯವಸ್ಥೆ ಕಾರ್ಯಕರ್ತರು ಮಾಡಬೇಕಾಗಿದೆ, ಮತ್ತೆ ಮೋದಿ ಸರ್ಕಾರ ಆಡಳಿತಕ್ಕೆ ತರುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಕುಞಂಗಡ ಅರುಣ್ ಭೀಮಯ್ಯ ಕರೆ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆದ ತಾಲ್ಲೂಕು ಬಿಜೆಪಿ ಮಂಡಳ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರದ ಸ್ವಚ್ಛ ಆಡಳಿತ ಪ್ರಪಂಚದೆತ್ತರಕ್ಕೆ ಕೊಂಡೊಯ್ದಿದೆ. ಸೇನೆಯ ನೈತಿಕ ಧೈರ್ಯ ಹೆಚ್ಚಿದೆ. ಉಜ್ವಲ್ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಜನಪರ ಯೋಜನೆಗಳನ್ನು ಮೋದಿ ಸರ್ಕಾರ ನೀಡಿದೆ. ಭ್ರಷ್ಟಾಚಾರದಿಂದ ಮುಕ್ತವಾದ ಸರ್ಕಾರವೇ ಮೋದಿ ಸರ್ಕಾರ ಎಂದು ವಿವರಿಸಿದರು.

ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಬಿ.ವಿ. ಭಾರತೀಶ್ ಮಾತನಾಡಿ ದೇಶ ಇಂದು ರಾಜಕೀಯ, ಧಾರ್ಮಿಕತೆ, ಸಾಮಾಜಿಕ ವಾಗಿ ಪ್ರಪಂಚದಲ್ಲಿ ಮುಂಚೂಣಿ ಯಲ್ಲಿದೆ. ಇದಕ್ಕೆ ಮೋದಿ ಸರ್ಕಾರ ಕಾರಣ ಎಂದು ಬಣ್ಣಿಸಿದರು. ಮುಂದಿನ ಲೋಕಸಭಾ ಚುಣಾವಣೆಗೆ ಹೋಗುವ ಹಾದಿಯಲ್ಲಿ ಜನರ ಸಾವಿರಾರು ಪ್ರಶ್ನೆಗಳು ಎದುರಾಗುತ್ತವೆ, ಇದಕ್ಕೆ ಕಾರ್ಯಕರ್ತರು ಸರ್ಕಾರದ ಯೋಜನೆಗಳ ಬಗ್ಗೆ ತಿಳಿದು ಜನರಿಗೆ ಮುಟ್ಟಿಸಬೇಕು ಎಂದರು.

ಶಿವಕುಮಾರ ಸ್ವಾಮಿಗಳಿಗೆ ಭಾರತರತ್ನ ಪ್ರಶಸ್ತಿ ಕೊಡಲು ಬಿಜೆಪಿಗೆ ಸಾಧ್ಯವಾಗಿಲ್ಲ ಎಂಬ ಆರೋಪ ಇದೆ. ಆದರೆ, ಭಾರತರತ್ನ ಪ್ರಶಸ್ತಿ ನೀಡಲು ಅದರದೇ ಆದ ನಿಯಮಗಳಿವೆ. 40 ಇಲಾಖೆಗಳ ಎನ್.ಓ.ಸಿ. ಪತ್ರ ನೀಡಬೇಕು. ಪ್ರಶಸ್ತಿಗೆ ಬೇಕಾದ ವ್ಯವಸ್ಥೆ ರೂಪಿಸಲು ಕನಿಷ್ಟವೆಂದರು ಐದು ತಿಂಗಳಾದರೂ ಬೇಕು. ಆದರೆ, ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಸ್ವಾಮಿಗಳು ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು.

ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಮಾತನಾಡಿ, ಭಾರತ ಇಂದು ಮೂರನೇ ಸ್ಥಾನ ತಲಪಲು ಮೋದಿಯವರ ನಿಸ್ವಾರ್ಥ ಸೇವೆಯೇ ಕಾರಣ. ಭ್ರಷ್ಟಾಚಾರ ಇಲ್ಲದ ಆಡಳಿತ ನಡೆಸುವ ಮೂಲಕ ಮಾದರಿಯಾಗಿ ದ್ದಾರೆ. ಇವರ ಆಡಳಿತದಲ್ಲಿ ಉಗ್ರಗಾಮಿಗಳ ಅಟ್ಟಹಾಸವನ್ನು ದಮನಮಾಡಲಾಗಿದೆ. ನೋಟ್ ಬ್ಯಾನ್ ಮೂಲಕ ನಕ್ಸಲಿಸಂ ವ್ಯವಸ್ಥೆಯನ್ನು ಅತಂತ್ರಗೊಳಿಸಲಾಗಿದೆ ಎಂದರು.

ಇದೇ ಸಂದರ್ಭ ಜಿ.ಪಂ. ಉಪಾಧ್ಯಕ್ಷ ಸ್ಥಾನ ನೀಡಬೇಕು ಎಂದು ಕಾರ್ಯಕರ್ತರು ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್ ಅವರಲ್ಲಿ ಒತ್ತಾಯಿಸಿದರು. ಒಂದು ವಾರದೊಳಗೆ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವದು ಎಂದು ಅಧ್ಯಕ್ಷರು ಭರವಸೆ ನೀಡಿದರು. ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರ ಸೂಚಿಸಿದರೂ ಜಿಲ್ಲೆಯಲ್ಲಿ ಅನುಷ್ಠಾನ ಗೊಂಡಿಲ್ಲ. ಕೂಡಲೇ ಭತ್ತ ಖರೀದಿ ಹಾಗೂ ಹುಲ್ಲು ಖರೀದಿಗೆ ವ್ಯವಸ್ಥೆ ರೂಪಿಸದೆ ಇದ್ದರೆ ಮುಂದಿನ ದಿನಗ ಳಲ್ಲಿ ಪ್ರತಿಭಟನೆ ನಡೆಸಲಾಗುವದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾ ಬಿಜೆಪಿ ವರ್ತಕರ ಪ್ರಕೋಷ್ಟ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ, ಜಿಲ್ಲಾ ಖಜಾಂಜಿ ಗುಮ್ಮಟೀರ ಕಿಲನ್ ಗಣಪತಿ, ಜಿ.ಪಂ. ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ಮುಕೋಂಡ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್, ಅಪ್ಪಂಡೇರಂಡ ಭವ್ಯ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ತಾಲೂಕು ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ತಾಲೂಕು ಬಿಜೆಪಿ ಕಾರ್ಯದರ್ಶಿ ಸುವಿನ್ ಗಣಪತಿ, ಲಾಲಾ ಭೀಮಯ್ಯ, ಕುಂಬೆಯಂಡ ಗಣೇಶ್, Sಜಾಂಜಿ ಶ್ಯಾಮ್ ಪೂಣಚ್ಚ, ರಾಜ್ಯ ಬಿಜೆಪಿ ಹಿಂದುಳಿದ ವರ್ಗ ಸದಸ್ಯ ಇ.ಸಿ. ಜೀವನ್, ಅಲ್ಪಸಂಖ್ಯಾತ ಘಟಕ ಸದಸ್ಯ ಜೋಕಿಂ, ತಾ.ಪಂ. ಉಪಾಧ್ಯಕ್ಷ ಚಲನ್, ತಾಲೂಕು ಬಿಜೆಪಿ ಹಿಂದುಳಿದ ವರ್ಗ ಅಧ್ಯಕ್ಷ ಚಂದ್ರಶೇಖರ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ ಹಾಗೂ ಇತರ ಪ್ರಮುಖರು ಹಾಜರಿದ್ದರು.

ವರದಿ ಎನ್.ಎನ್. ದಿನೇಶ್