*ಸಿದ್ದಾಪುರ, ಫೆ. 5: ವಾಲ್ನೂರು–ತ್ಯಾಗತ್ತೂರು ಗ್ರಾಮ ವ್ಯಾಪ್ತಿಯ ಅಭ್ಯತ್‍ಮಂಗಲ ಗ್ರಾಮದ ಕಾನನ ಕಾಡುವಿನಲ್ಲಿರುವ ಸಂಸ್ಥೆಯೊಂದು ಕಾಫಿ ಸಂಸ್ಕರಿಸಿದ ಕಲುಷಿತ ಪಲ್ಪಿಂಗ್ ನೀರನ್ನು ತೋಡಿಗೆ ಬಿಡುತ್ತಿರುವ ಪರಿಣಾಮ ತೋಡಿನ ನೀರು ವಿಷಕಾರಕವಾಗಿ ಹರಿಯುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸಂಸ್ಥೆಯ ಪ್ರಮುಖರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಸ್ಥಳೀಯ ನಿವಾಸಿಗಳು ನಿತ್ಯ ಉಪಯೋಗಕ್ಕೆ ತೋಡಿನ ನೀರನ್ನು ಬಳಸುತ್ತಿದ್ದಾರೆ. ಸುತ್ತಮುತ್ತಲ ಜಾನುವಾರುಗಳು ಕೂಡ ಕುಡಿಯಲು ಇದೇ ತೋಡಿನ ನೀರನ್ನು ಬಳುಸುತ್ತಿವೆ.

ಜಿಲ್ಲೆಯಲ್ಲಿರುವ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು ತೋಡು, ನದಿಗಳಿಗೆ ಕಾಫಿ ಸಂಸ್ಕರಿಸಿದ ನೀರು ಸೇರಿದಂತೆ ಇತರೆ ಕಲುಷಿತ ನೀರನ್ನು ಹರಿಯ ಬಿಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.