ಮಡಿಕೇರಿ, ಫೆ.5 : ಸೋಮವಾರಪೇಟೆ ತಾಲೂಕಿನ ಅಭ್ಯತ್‍ಮಂಗಲ ದೇವರ ಕಾಡಿನ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್, ಶಾಸಕರ ವಿರುದ್ಧ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಕಾರ್ಯದರ್ಶಿ ಡಾ. ಬಿ.ಸಿ. ನಂಜಪ್ಪ, ಅಭ್ಯತ್‍ಮಂಗಲದ ಸರ್ವೆ ಸಂಖ್ಯೆ 10/1ರ ಅಯ್ಯಪ್ಪ ದೇವರ ಕಾಡು ಅತಿಕ್ರಮಣಗೊಂಡಿದೆ. ಈ ಪ್ರದೇಶಕ್ಕೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಸೂಚನೆ ನೀಡುವದು ಅರಣ್ಯ ಕಾಯ್ದೆ ಮತ್ತು ನ್ಯಾಯಾಲಯಗಳ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ; ಇದನ್ನು ಆಧಾರವಾಗಿಸಿಕೊಂಡು ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮತ್ತು ಶಾಸಕ ಸ್ಥಾನ ಅನರ್ಹಗೊಳಿಸಲು ಕೂಡ ಕಾನೂನಿನಡಿ ಅವಕಾಶವಿದೆ. ಇದೇ ಕಾರಣಕ್ಕೆ ಟ್ರಸ್ಟ್ ಅಪ್ಪಚ್ಚು ರಂಜನ್ ಅವರಿಗೆ ನೋಟೀಸ್ ನೀಡಿ ಅರಣ್ಯ ಕಾಯ್ದೆ ಉಲ್ಲಂಘನೆಗಾಗಿ ಮತ್ತು ಅಧಿಕಾರಿಗೆ ಪ್ರಚೋದನೆ ನೀಡಿದ ಕಾರಣಕ್ಕಾಗಿ ನಿಮ್ಮ ವಿರುದ್ಧ ಏತಕ್ಕೆ ಕಾನೂನು ಹೋರಾಟ ನಡೆಸಬಾರದೆಂದು ಪ್ರಶ್ನಿಸಿದೆ ಎಂದರು.
ಮುಂದಿನ 15 ದಿನಗಳ ಒಳಗೆ ಶಾಸಕರು ಬಹಿರಂಗವಾಗಿ ಕ್ಷಮೆ ಯಾಚಿಸಿ, ದೇವರ ಕಾಡಿನಲ್ಲಿ ಇನ್ನು ಮುಂದೆ ಯಾವದೇ ಅಕ್ರಮ, ನಿಯಮ ಬಾಹಿರ ಕಾರ್ಯಕ್ಕೆ ಮುಂದಾಗುವದಿಲ್ಲವೆಂದು ಈ ನೋಟೀಸ್‍ಗೆ ಲಿಖಿತ ಹೇಳಿಕೆ ನೀಡಬೇಕು. ತಪ್ಪಿದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವದಾಗಿ ಎಚ್ಚರಿಕೆ ನೀಡಿದರು.
ಬ್ರಹ್ಮಗಿರಿ ಪ್ರವೇಶ ನಿರ್ಬಂಧಿಸಿ
ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ಕಿಡಿಗೇಡಿಗಳಿಂದ ಅಗ್ನಿ ಆಕಸ್ಮಿಕಗಳನ್ನು ತಡೆಯಲು ಪ್ರಮುಖ ಬೆಟ್ಟಗಳ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಡಾ. ಬಿ.ಸಿ. ನಂಜಪ್ಪ ಇದೇ ಸಂದರ್ಭ ಒತ್ತಾಯಿಸಿದರು. ಪವಿತ್ರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದ್ದು, ಈ ಬೆಟ್ಟ ಪ್ರವೇಶಿಸುವ ಕಿಡಿಗೇಡಿಗಳು ಅಗ್ನಿ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಗಳಿರುವದರಿಂದ ಪ್ರವೇಶ ನಿರ್ಬಂಧಿಸಬೆÉೀಕೆಂದರು.