ಕುಶಾಲನಗರ, ಫೆ. 5: ಕರ್ನಾಟಕ ರೈತ ಸಂಘ ಹಾಗೂ ಅಖಿಲ ಭಾರತ ಮಹಿಳಾ ಸಂಘಟನೆ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕೋಣಮಾರಿಯಮ್ಮ ದೇವಾಲಯದಿಂದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದ ಸಮಿತಿ ಮಹಿಳಾ ಕಾರ್ಯಕರ್ತರು ಮದ್ಯ ನಿಷೇಧಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿ ನಾಡಕಚೇರಿ ತನಕ ಸಾಗಿದರು.
ಈ ಸಂದರ್ಭ ಮಾತನಾಡಿದ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷೆ ಪವಿತ್ರ, ಮದ್ಯಪಾನ ಚಟಗಳಿಗೆ ದಾಸರಾದ ಬಹುತೇಕ ಕೂಲಿ ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗುತ್ತಿರುವ ಘಟನೆಗಳು ನಡೆಯುತ್ತಿವೆ.
ಹಳ್ಳಿಗಳ ಸಣ್ಣ ಪುಟ್ಟ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ಮೂಲಕ ಮಾದಕ ವಸ್ತುಗಳಿಗೆ ಯುವ ಪೀಳಿಗೆ ದಾಸರಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ ಎಂದರು.
ರಾಜ್ಯ ಸರಕಾರ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ನಿಷೇದ ಮಾಡಬೇಕೆಂದು ಅವರು ಆಗ್ರಹಿಸಿದರು. ಪ್ರತಿಭಟನಾಕಾರರು ನಾಡ ಕಚೇರಿ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ಸಣ್ಣಪ್ಪ, ಸಿದ್ದಯ್ಯ, ಪ್ರಕಾಶ್, ಮಹಿಳಾ ಸಂಘಟನೆ ಪ್ರಮುಖರಾದ ಸಾವಿತ್ರಮ್ಮ, ಜಯಮ್ಮ, ಅನಿತಾ ಮತ್ತಿತರರು ಇದ್ದರು.