(ವಿಶೇಷ ವರದಿ: ದುಗ್ಗಳ ಸದಾನಂದ)
ನಾಪೋಕ್ಲು, ಜ.3: ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ ಕೊಡಗಿನ ಪ್ರಕೃತಿ ದುರಂತ, ಸ್ಥಳೀಯ ನಾಗರಿಕರ ಬದುಕು ಮತ್ತು ಭವಿಷ್ಯಕ್ಕೆ ಮಾಸದ ಬರೆ ಹಾಕಿರುವದು ನೀರಿನಷ್ಟೇ ಸತ್ಯ. ಮನೆಮಠಗಳು, ಗುಡಿಗೋಪುರಗಳೆನ್ನದೆ ಜನರ ಮತ್ತು ಸರ್ಕಾರಿ ಆಸ್ತ್ತಿಪಾಸ್ತಿಗಳು ನೆಲಕಚ್ಚಿದವು. ಬದುಕು ಕತ್ತಲೆಯಾಯಿತು. ಪ್ರಾಣಹಾನಿಗಳೂ ದಾಖಲಾದವು. ಕಣ್ಣೀರಕೋಡಿಯಿಂದ ಹೊರಬಂದು ಮತ್ತೆ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಜನರಿಗೆ, ಇತ್ತ ಆಡಳಿತ ವ್ಯವಸ್ಥೆಯ ಆಧಾರವೂ ಸಿಗುತ್ತಿಲ್ಲ ಎಂಬುದು ಅಷ್ಟೇ ವಾಸ್ತವ.
ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಸುಮಾರು 35 ಗ್ರಾಮಗಳಲ್ಲಿ ಕಣ್ಣಿಗೆ ಗೋಚರವಾಗುವ ದುರಂತ ನಡೆದಿದ್ದರೂ, ಅತಿವೃಷ್ಟಿಯ ಘೋರ ಪರಿಣಾಮ ಜಿಲ್ಲೆಯ ಎಲ್ಲೆಡೆಯೂ ಕಂಡುಬರುತ್ತಿದೆ. ಇದಕ್ಕೆ ಸ್ಪಷ್ಟ ಸಾಕ್ಷಿ ನಾಪೋಕ್ಲು ಬಳಿಯ ನಾಲಡಿ ಗ್ರಾಮ.
ಇಂದು ಈ ಗ್ರಾಮದಲ್ಲಿ ಲಾರಿಗಳಲ್ಲಿ ಕಾಫಿ ಸಾಗಿಸÀುತ್ತಿದ್ದ ಬೆಳೆಗಾರರು ಪಿಕಪ್‍ಗಳ ಮೊರೆ ಹೋಗಿದ್ದಾರೆ. ಕಡುಗೆಂಪಿನ ಹಣ್ಣುಗಳ ಸಾಲಿನಿಂದ ಕಂಗೊಳಿಸುತ್ತಾ ತೊನೆದಾಡುತ್ತಿದ್ದ ಕಾಫಿ ಗಿಡಗಳು ಸೊರಗಿದ ಸೊಪ್ಪಾಗಿವೆ. ಶ್ರಮಿಕರ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಹಸಿರು ತೋಟಗಳು ಕಮರುತ್ತಿವೆ. ಮುಖ್ಯವಾಗಿ, ಪ್ರತೀ ವರ್ಷ ಒಂದಿಷ್ಟಾದರೂ ಇಳುವರಿ ಪಡೆದು ಭವಿಷ್ಯದ ಬದುಕಿಗೆ ಸ್ವಾಗತ ಕೋರುತ್ತಿದ್ದ ಕಾಫಿ ಬೆಳೆಗಾರರ ಮುಖದಲ್ಲಿ ಮಂಕು ಕವಿದಿದೆ.
ಇದಕ್ಕೆಲ್ಲ ಕಾರಣವಾಗಿರುವದು ಕಳೆದ ಆಗಸ್ಟ್ ತಿಂಗಳವರೆಗೆ ಸುರಿದ ಭಾರೀ ವರ್ಷಧಾರೆ. ಧೋ ಎಂದು ಸತತ ಮೂರು ತಿಂಗಳು ಎಡೆಬಿಡದೆ ಸುರಿದ ಮಳೆಗೆ, ನಾಲಡಿ ವ್ಯಾಪ್ತಿಯ ಬಹುತೇಕ ಎಲ್ಲ ಕಾಫಿ ತೋಟಗಳಲ್ಲಿ ಸ್ಮಶಾನದ ವಾತಾವರಣ ನಿರ್ಮಾಣವಾಗಿದೆ. ಈ ವ್ಯಾಪ್ತಿಯಲ್ಲಿ ಸರಾಸರಿ 350ರಿಂದ 400 ಇಂಚು ಮಳೆ ದಾಖಲಾಗಿದೆ. ಮಳೆ ಹಾಗೂ ವಿಪರೀತ ಗಾಳಿಯ ಹೊಡೆತಕ್ಕೆ ತತ್ತರಿಸಿಹೋದ ಕಾಫಿ ತೋಟಗಳಲ್ಲಿ ಫಸಲು ನೆಲಕಚ್ಚಿದೆ. ಮಳೆಯೇನೋ ನಿಧಾನವಾಗಿ ಕರಗಿತು. ಆದರೆ, ಅದರ ಪರಿಣಾಮ ಮಾತ್ರ ಘೋರವಾಯಿತು. ಆಭರಣ ಕಳೆದುಕೊಂಡ ಸುಂದರಿಯಂತೆ, ಕಾಫಿಗಿಡಗಳು ಬೋಳಾದವು. ಬೆಳೆಗಾರರು ದಿಕ್ಕಿಲ್ಲದಂತಾದರು.
ಇಂದು ಬೆಳೆಗಾರರು ಪಡೆದ ಸಾಲವನ್ನು ಹಿಂದಿರುಗಿಸುವ ಪರಿಸ್ಥಿತಿಯಲ್ಲಿಲ್ಲ. ನಿತ್ಯದ ಜೀವನಕ್ಕೆ ಪರದಾಡುವಂತಾಗಿರುವ ಬೆಳೆಗಾರರು, ಕೈಗೆ ಸಿಕ್ಕ ಅಳಿದುಳಿದ ಫಸಲನ್ನು ನೆನೆದು ಕಣ್ಣೀರಿಡುವಂತಾಗಿದೆ. ಸರ್ಕಾರವು ತಮ್ಮ ಸಾಲ ಮನ್ನಾ ಮಾಡಬೇಕೆಂದು ಅವರು ಗೋಗರೆಯುವಂತಾಗಿದೆ. ಸಮಸ್ಯೆ ಇಲ್ಲಿಗೆ ಮುಗಿಯುವದಿಲ್ಲ. ಈ ವರ್ಷದ ಸಂಕಷ್ಟ, ಮುಂದಿನ ಇಳುವರಿಗೂ ಧಕ್ಕೆ ತಂದೊಡ್ಡುವ ಆತಂಕವಿದೆ. ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಯೇ ಕೈಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾದರೂ ಅಚ್ಛರಿಯಿಲ್ಲ.
ಪ್ರತೀ ವರ್ಷ 500ರಿಂದ 600 ಬ್ಯಾಗ್ ಕಾಫಿ ಇಳುವರಿ ಪಡೆಯುತ್ತಿದ್ದ ಬೆಳೆಗಾರರು, ಇಂದು 150ರಿಂದ 180 ಚೀಲದಿಂದಷ್ಟೇ ಸಂತುಷ್ಟರಾಗುವ ಪರಿಸ್ಥಿತಿ ಒದಗಿಬಂದಿದೆ. ಬಹುತೇಕ ತೋಟಗಳಲ್ಲಿ ಶೇಕಡಾ 60ರಿಂದ 70 ಭಾಗ ಕಾಫಿ ಫಸಲು ಅತಿವೃಷ್ಟಿಗೆ ಬಲಿಯಾಗಿದೆ.
ವಿಪರ್ಯಾಸವೆಂದರೆ, ವಿಶ್ವದಲ್ಲೇ ಅತೀ ಹೆಚ್ಚು ವಿದೇಶಿ ವಿಮಯ ಗಳಿಸುವ 2ನೇ ಬೆಳೆ ಎಂಬ ಖ್ಯಾತಿ ಕಾಫಿಗಿದ್ದರೂ, ನಮ್ಮಲ್ಲಿ ಈ ಬೆಳೆಗೆ ಸರ್ಕಾರದ ವಿಮಾ ಸೌಲಭ್ಯವಿಲ್ಲ. ಕರಿಮೆಣಸು ಬೆಳೆಗೆ ಕೇಂದ್ರ ಸರ್ಕಾರದಿಂದ ಫಸಲ್ ಭೀಮಾ ಯೋಜನೆಯಡಿ ಸೌಲಭ್ಯವಿದ್ದರೂ, ಕಂತು ಪಾವತಿಸಿದ ಬೆಳೆಗಾರರಿಗೆ ಈ ಸೌಲಭ್ಯವೂ ಸಿಕ್ಕಿಲ್ಲ. ಕಾರ್ಮಿಕರ ಕೊರತೆ, ಗೊಬ್ಬರದ ಬೆಲೆ ಏರಿಕೆಗಳ ಮಧ್ಯೆ ಶ್ರಮಮೀರಿ ಗಿಡಗಳನ್ನು ಪೋಷಿಸಿದ ಬೆಳೆಗಾರರು, ಇಂದು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಜಲಪ್ರಳಯಕ್ಕೆ ಮಿಡಿದ ಸರ್ಕಾರಗಳು, ಕೊಡಗಿನ ಜೀವನಾಡಿಯಾಗಿರುವ ಕಾಫಿಯನ್ನೂ ಉಳಿಸಿಕೊಳ್ಳಲು ನೆರವು ನೀಡಬೇಕಿದೆ ಎಂಬುದು ಬೆಳೆಗಾರರ ಆಗ್ರಹ.