ಕ್ಯಾನ್ಸರ್ ಎನ್ನುವದು ವಿಶ್ವದ ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ 2ನೆ ಅಗ್ರಸ್ಥಾನವನ್ನು (ಮೊದಲ ಸ್ಥಾನ ಹೃದಯಾಘಾತ) ಅಲಂಕರಿಸಿದೆ. ಕನ್ನಡದಲ್ಲಿ ಕ್ಯಾನ್ಸರ್ ರೋಗವನ್ನು ಅರ್ಬುದ ರೋಗ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ಕೊಟ್ಯಾಂತರ ಮಂದಿ ಕ್ಯಾನ್ಸರ್‍ನಿಂದಾಗಿ ಸಾಯುತ್ತಿದ್ದಾರೆ. ಸರಿಸುಮಾರು ವರ್ಷದಲ್ಲಿ 15 ಮಿಲಿಯನ್ ಮಂದಿ ಕ್ಯಾನ್ಸರ್‍ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ, ಗಂಟಲು, ಶ್ವಾಸಕೋಶ, ಕರುಳಿನ ಕ್ಯಾನ್ಸರ್ ಮತ್ತು ಪ್ರೋಸ್ಟೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಮುಂದುವರಿದ ರಾಷ್ಟ್ರಗಳಲ್ಲಿ ಒಂದು ಅಥವಾ 2ನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಬಡತನ ಮೂಢನಂಬಿಕೆ ಅನಕ್ಷರತೆ ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಕ್ಯಾನ್ಸರ್ ಎಂಬ ಮಾರಿ ಇಂದು ಅತ್ಯಂತ ವೇಗದಲ್ಲಿ ವ್ಯಾಪಿಸುತ್ತಿದೆ. ಕ್ಯಾನ್ಸರ್ ಕುರಿತು ಮಾಹಿತಿ ನೀಡಲು, ಕ್ಯಾನ್ಸರ್‍ನಿಂದ ಉಂಟಾಗುತ್ತಿರುವ ಸಾವು ನೋವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ 2000ನೇ ಇಸವಿಯಲ್ಲಿ ಫೆಬ್ರವರಿ 4ನ್ನು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಘೋಷಿಸಲಾಯಿತು.

ಭಾರತ ದೇಶವೊಂದರಲ್ಲಿ ವರ್ಷಕ್ಕೆ 10 ಲಕ್ಷ ಜನರು ಕ್ಯಾನ್ಸರ್‍ಗೆ ತುತ್ತಾಗುತ್ತಾರೆ ಮತ್ತು ವಿಶ್ವದ ಕ್ಯಾನ್ಸರ್ ರ್ಯಾಂಕ್ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ ಲಭಿಸಿದೆ. ಈ ಪೈಕಿ ಶೇ. 90 ರಷ್ಟು ಕ್ಯಾನ್ಸರ್ ತಂಬಾಕಿನ ಸೇವನೆಯಿಂದ ಬರುತ್ತದೆ ಎಂಬದು ಎಲ್ಲರಿಗೂ ತಿಳಿದ ವಿಚಾರ. ಸಮಾಧಾನಕರವಾದ ಅಂಶವೆಂದರೆ ಕ್ಯಾನ್ಸರ್‍ಅನ್ನು ದುಶ್ಚಟಗಳಿಂದ ನಿಯಂತ್ರಿಸಿ ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಮತ್ತು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಗುಣಪಡಿಸಬಹುದು.

ಮಕ್ಕಳಲ್ಲಿ ಕ್ಯಾನ್ಸರ್ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಮಕ್ಕಳ ಕ್ಯಾನ್ಸರ್ ವಯಸ್ಕರಿಗಿಂತ ಹಲವು ವಿಧಗಳಲ್ಲಿ ಭಿನ್ನ. ಎಲ್ಲ ಕ್ಯಾನ್ಸರ್‍ಗಳು ಶೇ.3ರಷ್ಟು ಮಕ್ಕಳಲ್ಲಿ ಕಂಡುಬರುತ್ತವೆ. ವಿಶ್ವಾದ್ಯಂತ, 1-4ರ ವಯೋಮಾನದ ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್‍ಗಳಲ್ಲಿ ಸಾಮಾನ್ಯವಾದುದೆಂದರೆ ಲುಕೇಮಿಯಾ ಅಂದರೆ ರಕ್ತದ ಕ್ಯಾನ್ಸರ್ ಹಾಗೂ ಲಿಂಫೋಮಾ (ದುಗ್ಧ ಗ್ರಂಥಿಯ ಕ್ಯಾನ್ಸರ್). ಕ್ಯಾನ್ಸರ್ ಪೀಡಿತ ಶೇ.80 ಮಕ್ಕಳಲ್ಲಿ ಇವೇ ಕಂಡುಬಂದಿವೆ.

ಭಾರತದಲ್ಲಿ ಇವುಗಳ ಪ್ರಮಾಣ ಶೇ.30ರಷ್ಟಿದೆ. ನಂತರದ ಸ್ಥಾನದಲ್ಲಿ ಮಿದುಳು ಮತ್ತು ಬೆನ್ನುಹುರಿ ಕ್ಯಾನ್ಸರ್ ಇದೆ. ಮಕ್ಕಳಲ್ಲಿ ಕಾಣುವ ಕ್ಯಾನ್ಸರ್ ಪ್ರಕರಣಗಳಲ್ಲಿ ಇದರ ಪ್ರಮಾಣ ಶೇ.20ರಷ್ಟು. ಮಕ್ಕಳಲ್ಲಿ ಸುಮಾರು 16 ವಿಧದ ಕ್ಯಾನ್ಸರ್‍ಗಳು ಮತ್ತು 100 ಉಪ-ವಿಧದ ಕ್ಯಾನ್ಸರ್‍ಗಳು ಕಂಡುಬರುತ್ತವೆ.

ತಕ್ಷಣ ಚಿಕಿತ್ಸೆ ಕೊಡಿಸಿ

ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ವರ್ಷಕ್ಕೆ ಶೇ.2-3ರಷ್ಟು ಹೆಚ್ಚುತ್ತಿವೆ. ಒಟ್ಟಾರೆ ಕ್ಯಾನ್ಸರ್ ರೋಗಿಗಳಲ್ಲಿ ಶೇ.5.5ರಷ್ಟು ಮಕ್ಕಳೇ ಎನ್ನುವದು ಬೇಸರದ ಸಂಗತಿ. ವಾರ್ಷಿಕವಾಗಿ 50 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಪರಿಸ್ಥಿತಿ ಇಷ್ಟೆಲ್ಲ ತೀವ್ರವಾಗಿದ್ದರೂ ಪ್ರತಿ ಹತ್ತು ಮಕ್ಕಳಲ್ಲಿ ಒಂದು ಮಗುವಿಗೆ ಮಾತ್ರ ಸಂಪೂರ್ಣ ಚಿಕಿತ್ಸೆ ದೊರಕುತ್ತಿದೆ. ಇದಕ್ಕೆ ಮುಖ್ಯ ಕಾರಣ ವೈದ್ಯರ ಕೊರತೆ, ಆರ್ಥಿಕ ದುಸ್ಥಿತಿ. ಭಾರತದಲ್ಲಿ ಕ್ಯಾನ್ಸರ್ ಪತ್ತೆ ಸಹ ನಿಧಾನವಾಗಿದೆ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಸೂಕ್ತ ಮಾನಸಿಕ ಬೆಂಬಲ, ಭಾವನಾತ್ಮಕ ಉತ್ತೇಜನ ಅವಶ್ಯ.

ಮುನ್ನೆಚ್ಚರಿಕೆಯೇನು?: ಸಾಧ್ಯವಾದಷ್ಟೂ ಸ್ವಚ್ಛ ಪರಿಸರದಲ್ಲಿ ಮಕ್ಕಳನ್ನು ಬೆಳೆಸುವದು, ಕೃತಕ ಬಣ್ಣ ಹಾಕಿದ ಬೇಕರಿ ತಿನಿಸುಗಳ ಸೇವನೆಯಿಂದ ದೂರ ಇರುವದು, ಜಂಕ್ ಫುಡ್‍ಗಳ ಸೇವನೆ ಸಲ್ಲ, ತೂಕ ನಿಯಂತ್ರಣಕ್ಕೆ, ನಿಗದಿತ ವ್ಯಾಯಾಮ ರೂಢಿಸಬೇಕು.

- ಕೆ.ಎಂ. ಇಸ್ಮಾಯಿಲ್ ಕಂಡಕೆರೆ