ಮಡಿಕೇರಿ, ಫೆ. 3: ಭಾರತೀಯ ಸೇನೆಯಲ್ಲಿ ಸೇನಾ ಮೆಡಲ್ ಪಡೆದಿದ್ದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಮೂಲತಃ ಜಿಲ್ಲೆಯ ಮೂರ್ನಾಡಿನ ಪಾಂಡಂಡ ಎಂ. ಮುತ್ತಪ್ಪ (51) ಅವರು ತಾವು ಸೇವೆ ಸಲ್ಲಿಸಿದ್ದ ಸೇನಾ ವಿಭಾಗದ ಸಂಸ್ಥಾಪನಾ ದಿನದ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ಸಂದರ್ಭ ರೈಲಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಿನ್ನೆ ಸಂಭವಿಸಿದೆ.
ಸೇನೆಯಿಂದ ನಿವೃತ್ತರಾದ ಬಳಿಕ ಬೆಂಗಳೂರಿನಲ್ಲಿ ಬಾಷ್ ಕಂಪೆನಿಯಲ್ಲಿ ಡಿ.ಜಿ.ಎಂ. ಆಗಿದ್ದ ಮುತ್ತಪ್ಪ ಅವರು ಮಧ್ಯಪ್ರದೇಶದ ಭೂಪಾಲ್‍ಗೆ ಈ ಹಿಂದೆ ತಾವು ಸೇವೆ ಸಲ್ಲಿಸಿದ್ದ 6ನೇ ಮರಾಟಾಲೈಟ್ ಇನ್‍ಫ್ಯಾಂಟ್ರಿಯ ಸಂಸ್ಥಾಪನಾ ದಿನದ ಸಮಾರಂಭಕ್ಕೆ ಜ. 29ರಂದು ತೆರಳಿದ್ದರು. ಬೆಂಗಳೂರು ತಿಪ್ಪೆಸಂದ್ರದಲ್ಲಿ ನೆಲೆಸಿದ್ದ ಇವರು ಸಮಾರಂಭ ಮುಗಿಸಿ ರೈಲಿನಲ್ಲಿ ಪತ್ನಿ ಕಮಲ (ತಾಮನೆ ಕುಂಜಿಲಗೇರಿ ಮುಕ್ಕಾಟಿರ) ಹಾಗೂ ಪುತ್ರಿಯೊಂದಿಗೆ ಹಿಂತಿರುಗುತ್ತಿದ್ದ ಸಂದರ್ಭ ತಾವು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಮೃತದೇಹವನ್ನು ರೆಜಿಮೆಂಟ್‍ನ ಸಹಕಾರದೊಂದಿಗೆ ಬೆಂಗಳೂರಿಗೆ ತರಲಾಗುತ್ತಿದ್ದು, ಮಂಗಳವಾರ ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಮುತ್ತಪ್ಪ ಅವರು ಡಿ.ಜಿ.ಎಂ. ಆಗಿದ್ದ ಬಾಷ್ ಕಂಪೆನಿಗೆ ಭೇಟಿ ನೀಡಿದ್ದ ಸಂದರ್ಭ ಮುತ್ತಪ್ಪ ಅವರೊಂದಿಗೆ ಚರ್ಚಿಸಿದ್ದ ಸಂದರ್ಭದ ಚಿತ್ರವಿದು. ಮೃತರು ಪತ್ನಿ ಕಮಲ, ಓರ್ವಪುತ್ರಿ ಹಾಗೂ ದೆಹಲಿಯಲ್ಲಿ ಐ.ಎ.ಎಸ್. ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿರುವ ಓರ್ವ ಪುತ್ರನನ್ನು ಅಗಲಿದ್ದಾರೆ.