ಭಾಗಮಂಡಲ, ಫೆ. 4: ಜಿಲ್ಲೆಯ ಪುಣ್ಯಕ್ಷೇತ್ರ ಭಾಗಮಂಡಲ ಪ್ರತಿವರ್ಷ ಮಳೆಗಾಲದಲ್ಲಿ ಎರಡು ಮೂರು ತಿಂಗಳು ಕಾವೇರಿ ನದಿ ಪ್ರವಾಹದಿಂದಾಗಿ ರಸ್ತೆ ಸಂಪರ್ಕ ಕಡಿದುಕೊಂಡು ಇಲ್ಲಿನ ಗ್ರಾಮಸ್ಥರು ಸಮಸ್ಯೆ ಅನುಭವಿಸುತ್ತಿದ್ದರು. ವಿಶೇಷವಾಗಿ ತಲಕಾವೇರಿ ಸುತ್ತಮುತ್ತಲ ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ತೆರಳುವದೆಂದರೆ ಸಮಸ್ಯೆಯಾಗಿ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಗ್ರಾಮಸ್ಥರ ಪ್ರಮುಖ ಬೇಡಿಕೆಯಾದ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಸೆ ಕೇಳಿಬಂದಿತ್ತು. ಆಗಿನ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭಾಗಮಂಡಲಕ್ಕೆ ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಭಾಗಮಂಡಲಕ್ಕೆ ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿದ್ದರು. ಸರ್ಕಾರದಿಂದ ಮೇಲ್ಸೇತುವೆ ನಿರ್ಮಾಣಕ್ಕಾಗಿ ಮೂವತ್ತೆರಡು ಕೋಟಿ ರೂಪಾಯಿ ಬಿಡುಗಡೆಗೊಂಡು ಕಳೆದ ಮೂರು ತಿಂಗಳಿನಿಂದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಜನರ ಬಹುದಿನದ ಬೇಡಿಕೆಯಾದ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡ ಬೆನ್ನಲ್ಲೇ ಜನಸಾಮಾನ್ಯರಿಗೆ ಕಿರಿಕಿರಿ ಹೆಚ್ಚುತ್ತಿದೆ. ಮೇಲ್ಸೇತುವೆ ಕಾಮಗಾರಿ ಕೆಲಸ ಕಾರ್ಯಗಳಿಂದ ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.
ಮೇಲ್ಸೇತುವೆಗಾಗಿ ಸ್ತಂಭಗಳ ನಿರ್ಮಾಣಕ್ಕೆ ಗುಂಡಿ ತೋಡುತ್ತಿದ್ದು ಇದರಿಂದ ಭಾಗಮಂಡಲ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗುಂಡಿ ತೋಡುವ ಸಂದರ್ಭ ಪಂಚಾಯಿತಿ ವತಿಯಿಂದ ಅಳವಡಿಸಲಾಗಿದ್ದ ಪೈಪ್ ಲೈನ್ಗಳು ಒಡೆದುಹೋಗಿ ಕಾವೇರಿ ನಾಡಿನ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಭಾಗಮಂಡಲಕ್ಕೆ ಪ್ರತಿದಿನ ಯಾತ್ರಾರ್ಥಿಗಳು ಹೆಚ್ಚುತ್ತಿದ್ದು ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಬಯಲು ಪ್ರದೇಶವನ್ನೇ ಬಳಸುವಂತಾಗಿದೆ.
(ಮೊದಲ ಪುಟದಿಂದ) ನೀರಿನ ಸಮಸ್ಯೆ ಸರಿಪಡಿಸಲು ಗ್ರಾಮಪಂಚಾಯಿತಿ ಮುಂದಾದರೆ ಪುನಃ ಹೊಸದಾಗಿ ನೀರಿನ ಪೈಪ್ಲೈನ್ ಅಳವಡಿಸಲು ಗ್ರಾಮ ಪಂಚಾಯಿತಿಯಿಂದ ಕ್ರಿಯಾ ಯೋಜನೆ ಆಗಬೇಕಿದೆ. ಬಳಿಕ ಹಣ ಬಿಡುಗಡೆಗೊಂಡ ಬಳಿಕ ಕೆಲಸ ಕಾರ್ಯ ನಡೆಯಲಿದೆ. ಇದು ಬಹಳಷ್ಟು ವಿಳಂಬವಾಗಲಿದೆ. ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಈಗಾಗಲೇ ಜಲಮೂಲಗಳು ಕ್ಷೀಣಗೊಂಡಿದ್ದು ಕಾವೇರಿ ನಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಪಾರ್ಕಿಂಗ್ ಸಮಸ್ಯೆ: ಕೇಶಮುಂಡನ ಮಾಡುವ ಸ್ಥಳದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದ್ದು ಯಾತ್ರಾರ್ಥಿಗಳಿಗೆ ವಾಹನ ನಿಲುಗಡೆಗೆ ಸ್ಥಳವಿಲ್ಲದಾಗಿದೆ. ರಸ್ತೆಯ ಬದಿಯಲ್ಲಿ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ಕಬ್ಬಿಣ, ಜಲ್ಲಿ, ಮರಳು ಮತ್ತಿತರ ವಸ್ತುಗಳನ್ನು ಹಾಕಿದ್ದು ಪಾರ್ಕಿಂಗ್ಗೆ ಸ್ಥಳಾವಕಾಶವಿಲ್ಲದೆ ಯಾತ್ರಾರ್ಥಿಗಳು ಕಿಲೋಮೀಟರ್ಗಟ್ಟಲೆ ನಡೆಯುವಂತಾಗಿದೆ.
ಅಂಗಡಿಗಳಿಗೆ ಧೂಳು: ಕಾಮಗಾರಿ ನಡೆಯುತ್ತಿದ್ದು ಇಲ್ಲಿನ ರಸ್ತೆ ಪೂರ್ತಿ ಧೂಳು ಮಯವಾಗಿದೆ. ಅಲ್ಲದೇ ರಸ್ತೆಯಲ್ಲಿ ಧೂಳು ಮಿಶ್ರಿತ ನೀರು ಹರಿಯುತ್ತಿದೆ. ಜಲ್ಲಿಪುಡಿ ಹಾರುತ್ತಿದ್ದು ಅಂಗಡಿಗಳಲ್ಲಿನ ದಿನಸಿ ಹಾಗೂ ಪೂಜಾ ಸಾಮಗ್ರಿಗಳು ಧೂಳು ಮಯವಾಗುತ್ತಿದ್ದು ಕಿರಿಕಿರಿ ಉಂಟುವಾಗುತ್ತಿದೆ ಎಂದು ಅಂಗಡಿ ಮಾಲೀಕರು ಆರೋಪಿಸಿದ್ದಾರೆ. ಅಂಗಡಿಗಳ ಮುಂದೆ ಸಾಮಗ್ರಿಗಳ ರಾಶಿ ಸುರಿದಿದ್ದು ಅಂಗಡಿ ವ್ಯಾಪಾರಕ್ಕೆ ಅಡ್ಡಿಯಾಗಿದೆ. ವ್ಯಾಪಾರವಿಲ್ಲದೇ ಬಾಡಿಗೆ ಕಟ್ಟಲು ಸಮಸ್ಯೆ ಉಂಟಾಗಿದೆ.
ಶಬ್ಧ ಮಾಲಿನ್ಯ: ಪಿಲ್ಲರ್ ಕಾಮಗಾರಿಗಳಿಗೆ ಒಂದು ಜನರೇಟರ್ ಹಾಗೂ ಮೋಟರ್ ಬಳಸುತ್ತಿದ್ದು ಒಂದು ಪಿಲ್ಲರ್ ನಿರ್ಮಾಣಕ್ಕೆ ಏಳರಿಂದ ಹದಿನೈದು ದಿನಗಳು ತಗಲುತ್ತಿದ್ದು ನಿರಂತರವಾದ ಶಬ್ಧದಿಂದ ಸಾರ್ವಜನಿಕರಿಗೆ ನಿತ್ಯವೂ ಕಿರಿಕಿರಿಯಾಗುತ್ತಿದೆ.
ಕಟ್ಟಡಗಳಲ್ಲಿ ಬಿರುಕು: ಆಧುನಿಕ ಯುಗದಲ್ಲಿ ಕಂಬ ನಿರ್ಮಿಸಲು ಹೊಂಡ ತೆಗೆಯಲು ಯಾಂತ್ರಿಕ ವಿಧಾನಗಳಿದ್ದರೂ ಹಳೆ ಕಾಲದ ರೀತಿ ಮೇಲಿನಿಂದ ಟನ್ಗಟ್ಟಲೆ ತೂಕದ ವಸ್ತುಗಳನ್ನು ಭೂಮಿಯ ಮೇಲೆ ಎತ್ತಿ ಹಾಕಿ ಹೊಂಡಗಳು ನಿರ್ಮಾಣವಾಗಿದೆ. ಸ್ಥಳೀಯ ಕಟ್ಟಡಗಳು ಅಲುಗಾಡುತ್ತಿವೆ. ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡು ಸ್ಥಳೀಯರು ಗಾಬರಿಗೊಂಡಿದ್ದು ಮೇಲ್ಸೇತುವೆ ಕಾಮಗಾರಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಭಾಗಮಂಡಲಕ್ಕೆ ಮೇಲ್ಸೇತುವೆ ಬೇಕು ಎಂಬದು ಭಾಗಮಂಡಲ ವ್ಯಾಪ್ತಿಯ ಜನರ ಅಭಿಪ್ರಾಯ. ಆದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸುವದು ಒಳಿತು. ಅಗತ್ಯ ವ್ಯವಸ್ಥೆಗಳನ್ನು ಮೊದಲೇ ಮಾಡಿಕೊಂಡಿದ್ದರೆ ಕಿರಿಕಿರಿಯಾಗುತ್ತಿರಲಿಲ್ಲ ಎಂಬದು ಸಾರ್ವಜನಿಕರ ಅನಿಸಿಕೆ. ರಸ್ತೆ ಅಗಲೀಕರಣ ಮಾಡಿಕೊಂಡು ನಂತರ ಕಾಮಗಾರಿ ಆರಂಭಿಸಿದ್ದರೆ ಒಳಿತಾಗುತ್ತಿತ್ತು ಎಂಬದು ಸಾರ್ವಜನಿಕರ ಅಭಿಪ್ರಾಯ. ವಾಹನಗಳು, ಕ್ರೇನ್ ಮತ್ತಿತರ ವಾಹನಗಳು ರಸ್ತೆಯಲ್ಲಿ ನಿಂತು ಕೆಲಸ ನಿರ್ವಹಿಸುವದರಿಂದ ಇಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. -ಸುನಿಲ್ ಕುಯ್ಯಮುಡಿ