ಮಡಿಕೇರಿ, ಫೆ. 3: ಮಡಿಕೇರಿಯ ಹೊಸ ಬಡಾವಣೆಯ ಕಾಮಾಕ್ಷಿ ಯೂತ್ ಕ್ರಿಕೆಟ್ ಕ್ಲಬ್ (ಕೆವೈಸಿಸಿ) ವತಿಯಿಂದ ತಾ. 8 ರಿಂದ 20 ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕ್ಲಬ್‍ನ ಪದಾಧಿಕಾರಿಗಳು, ಪಂದ್ಯಾವಳಿಯು 20 ಓವರ್‍ಗಳ ಪಂದ್ಯಾಟವಾಗಿದ್ದು, ಕೊಡಗಿಗೆ ಸಂಬಂಧಿಸಿದ ಕ್ರೀಡಾಪಟು ಗಳಿಗೆ ಮಾತ್ರ ಅವಕಾಶವಿರುತ್ತದೆ. ಜಿಲ್ಲೆಯವರಾಗಿದ್ದು, ಹೊರ ಜಿಲ್ಲೆ, ರಾಜ್ಯಗಳಲ್ಲಿ ನೆಲೆಸಿರುವ, ಉದ್ಯೋಗ ಅಥವಾ ವ್ಯಾಸಂಗ ಮಾಡುತ್ತಿರುವ ಕೊಡಗು ಮೂಲದವರು ಪಂದ್ಯಾಟದಲ್ಲಿ ಭಾಗವಹಿಸ ಬಹುದಾಗಿದ್ದು, ಆಸಕ್ತ ತಂಡಗಳು ತಾ. 6 ರೊಳಗಾಗಿ ನಿಗದಿತ ಮೈದಾನ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದರು. ಪಂದ್ಯಾವಳಿಯಲ್ಲಿ ಸುಮಾರು 20ಕ್ಕೂ ಅಧಿಕ ತಂಡಗಳ ಭಾಗವಹಿಸುವ ನಿರೀಕ್ಷೆಯಿದ್ದು, ಈ ಪಂದ್ಯಾವಳಿಯಲ್ಲಿ ಹಲವು ಉತ್ತಮ ದರ್ಜೆಯ (ಫಸ್ಟ್ ಡಿವಿಜನ್) ಆಟಗಾರರು ಭಾಗವಹಿಸಲಿದ್ದಾರೆ. ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. 33,333 ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 22,222 ನಗದು ಮತ್ತು ಟ್ರೋಫಿ ನೀಡಲಾಗುವದಲ್ಲದೆ, ಪಂದ್ಯ ಪುರುಷೋತ್ತಮ, ಉತ್ತಮ ಬೌಲರ್, ಉತ್ತಮ ಬ್ಯಾಟ್ಸ್‍ಮನ್ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ನೀಡಲಾಗುವದು ಎಂದು ಹೇಳಿದರು.
ಆಸಕ್ತ ತಂಡಗಳು ಹೆಚ್ಚಿನ ಮಾಹಿತಿಗೆ ಕ್ಲಬ್‍ನ ಅಧ್ಯಕ್ಷರನ್ನು (7022850339) ಅಥವಾ ಕಾರ್ಯದರ್ಶಿ (9886191558)ನ್ನು ಸಂಪರ್ಕಿಸಬಹುದು ಎಂದರು. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕೆವೈಸಿಸಿ ಭಾಗವಹಿಸುತ್ತಿದ್ದು, ಈ ಬಾರಿ ಎಂವೈಸಿಸಿ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಸರಣಿಯನ್ನು ಗೆದ್ದುಗೊಂಡಿರುವದರಿಂದ ತಂಡದ ಸದಸ್ಯರ ಹುಮ್ಮಸ್ಸು ಹೆಚ್ಚಿಸಿದೆ. ಈ ಹಿನ್ನೆಲೆ ಕೊಡಗಿನ ಕ್ರೀಡಾಪಟುಗಳ ಉತ್ತಮ ಭವಿಷ್ಯಕ್ಕಾಗಿ ಮುಂದಿನ ದಿನಗಳಲ್ಲಿ 16 ವರ್ಷ ಮತ್ತು 19 ವರ್ಷದ ಕೆಳಗಿನವರ ಪಂದ್ಯಾಟಗಳನ್ನು ಆಯೋಜಿಸಲು ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕ್ಲಬ್‍ನ ಅಧ್ಯಕ್ಷ ಕುಟ್ಟನ ಪ್ರಶಾಂತ್, ಕಾರ್ಯದರ್ಶಿ ಕೆ.ಎ. ರಾಮಚಂದ್ರ, ಪದಾಧಿಕಾರಿ ಗಳಾದ ಪುದಿಯನೆರವನ ರಿಷಿತ್ ಮಾದಯ್ಯ, ಶಾಂತೆಯಂಡ ಲೂತನ್ ಹಾಗೂ ಕುದ್ಪಜೆ ತ್ರಿಶು ಉಪಸ್ಥಿತರಿದ್ದರು.