ಸೀಮಾಂಚಲ ಎಕ್ಸ್‍ಪ್ರೆಸ್ ರೈಲು ದುರಂತ

ಪಾಟ್ನಾ, ಫೆ. 3: ಬಿಹಾರದಲ್ಲಿ ಹಳಿ ತಪ್ಪಿದ ಸೀಮಾಂಚಲ ಎಕ್ಸ್‍ಪ್ರೆಸ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಕೂಡ ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ ತಲಾ ರೂ. 4 ಲಕ್ಷ ನೀಡುವದಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ದುರಂತ ಸಂಬಂಧ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿತೀಶ್ ಕುಮಾರ್, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದರು. ಅಂತೆಯೇ ಮೃತರ ಕುಟುಂಬಸ್ಥರಿಗೆ ತಮ್ಮ ಸರ್ಕಾರದ ವತಿಯಿಂದ ಸಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ರೂ. 4 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ರೂ. 50 ಸಾವಿರ ನೀಡುವದಾಗಿ ಹೇಳಿದ್ದಾರೆ. ಅಂತೆಯೇ ದುರಂತದಲ್ಲಿ ಗಾಯಾಳುಗಳು ಮತ್ತು ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವದಾಗಿಯೂ ನಿತೀಶ್ ಕುಮಾರ್ ಹೇಳಿದರು. ಇನ್ನು ದುರಂತದ ಹಿನ್ನೆಲೆ ಬಿಹಾರದ ಸಹದಾಯ್ ಬುಜರ್ಗ್ ಮಾರ್ಗದಲ್ಲಿನ ಎಲ್ಲ ರೈಲುಗಳ ಸಂಚಾರ ನಿಷೇಧಿಸಲಾಗಿದ್ದು, ಬೇರೆ ಮಾರ್ಗಗಳಿಗೆ ಬದಲಿಸಲಾಗಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ಸಚಿವ ಡಿಕೆಶಿಗೆ ಮತ್ತೆ ಟ್ರಬಲ್

ಬೆಂಗಳೂರು, ಫೆ. 3: ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಒಟ್ಟು ನಾಲ್ಕು ಮಂದಿಯ ವಿರುದ್ಧ ಸಮನ್ಸ್ ಜಾರಿ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ಹಿನ್ನೆಲೆ ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಐವರಿಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗುವಂತೆ ಶನಿವಾರ ಸಮನ್ಸ್ ಜಾರಿ ಮಾಡಿದೆ. ಇಡಿ ಸಮನ್ಸ್ ಜಾರಿ ಮಾಡಿರುವ ಬೆನ್ನಲ್ಲೇ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕೂಡ ಶೋಕಾಸ್ ನೋಟಿಸ್ ನೀಡಿದ್ದು, ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಬೇನಾಮಿ ಆಸ್ತಿ ಪ್ರಕರಣ ಸಂಬಂಧ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಒಟ್ಟು ನಾಲ್ಕು ಮಂದಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಅಕ್ರಮ ಹಣವರ್ಗಾವಣೆ ಪ್ರಕರಣದ ಆರೋಪಿಗಳಾದ ಡಿಕೆಶಿ ಆಪ್ತರು ಎಂದು ಹೇಳಲಾಗುತ್ತಿರುವ ಸಚಿನ್ ನಾರಾಯಣ್, ಸುನೀಲ್ ಶರ್ಮ, ಆಂಜನೇಯ ಮತ್ತು ರಾಜೇಂದ್ರ ಎಂಬವರಿಗೆ ಇಡಿ ಸಮನ್ಸ್ ಜಾರಿ ಮಾಡಿ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ಕೂಡ ನೀಡಿದೆ. ಇನ್ನು ಇಡಿ ಅಧಿಕಾರಿಗಳು ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದು, ಒಂದು ವೇಳೆ ಆರೋಪಿಗಳು ನೀಡುವ ದಾಖಲೆಗಳು ತಾಳೆಯಾಗದಿದ್ದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಸಚಿವ ಡಿಕೆಶಿ ಸೇರಿದಂತೆ ಆರೋಪಿಗಳಾದ ಎಲ್ಲರಿಗೂ ಬಂಧನ ಭೀತಿ ಎದುರಾಗಿದ್ದು, ಈ ಐವರು ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ. ಇನ್ನು ದೆಹಲಿಯ ಫ್ಲಾಟ್‍ವೊಂದರಲ್ಲಿ ಇಡಿ-ಐಟಿ ಅಧಿಕಾರಿಗಳು ಧಾಳಿ ನಡೆಸಿದ್ದ ವೇಳೆ ರೂ. 3 ಕೋಟಿಗೂ ಅಧಿಕ ನಗದು ಸಿಕ್ಕಿತ್ತು. ಈ ಹಣವು ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ್ದು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಈ ಹಣವನ್ನು ತಮ್ಮ ಆಪ್ತರಾದ ಸಚಿನ್ ನಾರಾಯಣ್, ಸುನಿಲ್ ಶರ್ಮ, ಆಂಜನೇಯ ಹಾಗೂ ರಾಜೇಂದ್ರ ಎಂಬವರು ದೆಹಲಿಗೆ ಶಿವಕುಮಾರ್ ಸೂಚನೆಯಂತೆ ತೆಗೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಲಘು ಭೂಕಂಪ

ಶಿವಮೊಗ್ಗ, ಫೆ. 3: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಹೊಸನಗರದ ಭಾಗಗಳಲ್ಲಿ ಲಘು ಭೂಕಂಪನದ ಅನುಭವವಾಗಿದ್ದು, ಜನರು ಭಯ ಭೀತರಾಗಿದ್ದಾರೆ. ಹೊಸನಗರ ವ್ಯಾಪ್ತಿಯಲ್ಲಿ ಬರುವ ವಾರಾಹಿ ಜಲವಿದ್ಯುತ್ ಯೋಜನಾ ಪ್ರದೇಶದಲ್ಲಿ ಭಾನುವಾರ ಮಧ್ಯರಾತ್ರಿ 1.30 ಗಂಟೆಗಳ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ವಾರಾಹಿ ಜಲವಿದ್ಯುತ್ ಯೋಜನಾ ಪ್ರದೇಶಗಳಲ್ಲಿ ಬರುವ ಮೇಗರವಳ್ಳಿ, ಹನಸಾ, ಯಡೂರು, ಕರುಣಾಪುರ, ಗೌಡ್ರಗದ್ದೆ, ಶುಂಠಿ ಹಕ್ಲು ಇನ್ನಿತರೆಡೆಗಳಲ್ಲಿ ಭೂಕಂಪನದ ಅನುಭವವಾಗಿದ್ದು 2 ರಿಂದ 5 ಸೆಕೆಂಡ್‍ಗಳ ಕಾಲ ಭೂಕಂಪನವಾಗಿದ್ದು ಜನರು ಭೀತಿಯಿಂದ ಮನೆಗಳಿಂದ ಹೊರಗೋಡಿ ಬಂದಿದ್ದಾರೆ. ಇದರ ಪರಿಣಾಮ ಮನೆಯಲ್ಲಿ ಕೆಲ ಪಾತ್ರೆಗಳು ಉರುಳಿದೆ ಎನ್ನಲಾಗಿದ್ದು ಯಾವದೇ ಆಸ್ತಿಪಾಸ್ತಿ ಹಾನಿಯಾಗಲಿ, ಜೀವಹಾನಿಯಾಗಲಿ ಆದ ವರದಿಯಾಗಿಲ್ಲ. ಈ ಕುರಿತು ಮಾಹಿತಿ ನೀಡಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ತೀರ್ಥಹಳ್ಳಿ ತಾಲೂಕಿನ ವಿಠಲನಗರ ಭೂಕಂಪನದ ಕೇಂದ್ರ ದಲ್ಲಿ ರಿಕ್ಟರ್ ಮಾಪನದಲ್ಲಿ 2.2 ರಷ್ಟು ತೀವ್ರತೆ ದಾಖಲಾಗಿದೆ ಎಂದಿದ್ದಾರೆ.

ಸಬ್ ಜೈಲಿನಲ್ಲೇ ವಿಚಾರಣಾಧೀನ ಖೈದಿ ಆತ್ಮಹತ್ಯೆ!

ಉಡುಪಿ, ಫೆ. 3: ಉಡುಪಿ ಜಿಲ್ಲೆ ಹಿರಿಯಡ್ಕದಲ್ಲಿರುವ ಸಬ್ ಜೈಲಿನಲ್ಲಿ ವಿಚಾರಣಾಧೀನ ಖೈದಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಹಿರಿಯಡ್ಕ, ಅಂಜಾರು ಗ್ರಾಮದಲ್ಲಿನ ಜೈಲಿನಲ್ಲಿ ಕಿದಿಯೂರು ಗ್ರಾಮ ನಿವಾಸಿಯಾಗಿದ್ದ ಅಮರ್ ನಾಥ್ (32) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ್ಯಾಚಾರ, ಜಾತಿ ನಿಂದನೆ ಆರೋಪದಡಿ ಉಡುಪಿ ಮಹಿಳಾ ಠಾಣೆಯಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು. ಈತ ಕೆಲ ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿರುವ ವೀಡಿಯೋ ಕಾನ್ಫರೆನ್ಸ್ ಹಾಲ್‍ನ ಫ್ಯಾನ್‍ಗೆ ನೇಣು ಬಿಗಿದುಕೊಂಡು ಅಮರ್ ನಾಥ್ ಆತ್ಮಹತ್ಯೆ ಮಾಡಿಕೊಂಡದ್ದಾಗಿ ಪೊಲೀಸರು ಹೇಳಿದ್ದಾರೆ.

ಭಾರತಕ್ಕೆ ರೋಚಕ ಗೆಲವು

ನವದೆಹಲಿ, ಫೆ. 3: ನ್ಯೂಜಿಲ್ಯಾಂಡ್ ವಿರುದ್ಧದ 4ನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ 5ನೇ ಏಕದಿನ ಪಂದ್ಯದಲ್ಲಿ 35 ರನ್‍ಗಳಿಂದ ರೋಚಕ ಗೆಲವು ಸಾಧಿಸಿದ್ದು 4-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. ವೆಲ್ಲಿಂಗ್ಟನ್‍ನಲ್ಲಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 252 ರನ್‍ಗಳಿಗೆ ಸರ್ವಪತನ ಕಂಡಿತು. 253 ರನ್‍ಗಳ ಗುರಿ ಬೆನ್ನಟ್ಟಿದ್ದ ನ್ಯೂಜಿಲ್ಯಾಂಡ್ ಆಟಗಾರರು ಚಹಾಲ್ ಮಾರಕ ಬೌಲಿಂಗ್ ಧಾಳಿಗೆ ತತ್ತರಿಸಿದ್ದು 217 ರನ್‍ಗಳಿಗೆ ಆಲೌಟ್ ಆಗಿದ್ದು 35 ರನ್ ಗಳಿಗೆ ತಂಡ ಸೋಲು ಕಂಡಿದೆ. ಟೀಂ ಇಂಡಿಯಾ ಪರ ಅಂಬಟ್ಟಿ ರಾಯುಡು 90, ವಿಜಯ್ ಶಂಕರ್ 45, ಕೇದಾರ್ ಜಾದವ್ 34, ಹಾರ್ದಿಕ್ ಪಾಂಡ್ಯ 45 ರನ್ ಪೇರಿಸಿದ್ದಾರೆ. ನ್ಯೂಜಿಲ್ಯಾಂಡ್ ಪರ ಬೌಲಿಂಗ್‍ನಲ್ಲಿ ಹೆನ್ರಿ 4, ಬೋಲ್ಟ್ 3 ಹಾಗೂ ನಿಶಾಮ್ 1 ವಿಕೆಟ್ ಪಡೆದಿದ್ದಾರೆ. ನ್ಯೂಜಿಲ್ಯಾಂಡ್ ಪರ ಬ್ಯಾಟಿಂಗ್‍ನಲ್ಲಿ ಮನ್ರೋ 24, ಮಿಲಿಯಮ್ ಸನ್ 39, ಲಾಥಮ್ 37, ನಿಶಾಮ್ 44 ರನ್ ಪೇರಿಸಿದ್ದಾರೆ. ಟೀಂ ಇಂಡಿಯಾ ಬೌಲಿಂಗ್ ನಲ್ಲಿ ಚಹಾಲ್ 3, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ತಲಾ 2, ಭುವನೇಶ್ವರ್ ಕುಮಾರ್ ಹಾಗೂ ಕೇದಾರ್ ಜಾದವ್ ತಲಾ 1 ವಿಕೆಟ್ ಪಡೆದಿದ್ದಾರೆ.