ಮಡಿಕೇರಿ, ಫೆ. 3: ರೈತರು ಆತ್ಮಹತ್ಯೆ, ಪ್ರಾಕೃತಿಕ ವಿಕೋಪ, ಕಾಡುಪ್ರಾಣಿ ಧಾಳಿ, ರಾಜ್ಯ ರಸ್ತೆ ಸಾರಿಗೆ ವೇಳೆ ಅವಘಡ, ವಿದ್ಯುತ್ ಸ್ಪರ್ಶ ಇತ್ಯಾದಿ ದುರಂತಗಳಿಂದ ಪ್ರಾಣಹಾನಿ, ಅಂಗವೈಕಲ್ಯ, ಮಾರಣಾಂತಿಕ ಗಾಯ ಇತ್ಯಾದಿಗೆ ಒಳಗಾಗುವವರಿಗೆ ಏಕರೂಪ ಪರಿಹಾರ ಕಲ್ಪಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅಲ್ಲದೆ, ಇಂತಹ ಸಂದರ್ಭಗಳಲ್ಲಿ ರಾಜ್ಯದ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಗತ್ಯ ಗಮನ ಹರಿಸುವಂತೆ ಆದೇಶಿಸಲಾಗಿದೆ.ಕಳೆದ ವರ್ಷ (2017) ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಮೇಲ್ಮನೆ ಸದಸ್ಯರು ನಿಯಮ 330ರ ಅಡಿಯಲ್ಲಿ ಸರಕಾರದ ಗಮನ ಸೆಳೆಯುವದರೊಂದಿಗೆ, ರೈತರ ಆತ್ಮಹತ್ಯೆ ಸಹಿತ ಇತರ ತುರ್ತು ಸಂದರ್ಭಗಳಲ್ಲಿ ಪರಿಹಾರವನ್ನು ಕಲ್ಪಿಸಲು ಕೇಂದ್ರ ಸರಕಾರದ ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಡಿ, ಕಂದಾಯ ಇಲಾಖೆ ಕ್ರಮ ವಹಿಸಲು ನಿರ್ದೇಶಿಸಿದೆ.ಆ ಪ್ರಕಾರ ಜೀವಹಾನಿ ಅಥವಾ ಶಾಶ್ವತ ಅಂಗವಿಕಲತೆ ಸಂದರ್ಭ ರೂ. 5 ಲಕ್ಷ ಪರಿಹಾರ ನೀಡಬೇಕೆಂದು ನಿರ್ದೇಶಿಸಲಾಗಿದೆ. ಅಲ್ಲದೆ ಭಾಗಶಃ ಅಂಗವಿಕಲತೆ ಹಾಗೂ ಸಮಾನವಾಗಿ ತೊಂದರೆಗೆ ಒಳಗಾಗುವವರಿಗೆ ಕನಿಷ್ಟ ರೂ. 1 ಲಕ್ಷದಿಂದ ಗರಿಷ್ಠ ರೂ. 5 ಲಕ್ಷ ನೀಡಲು ಶಿಫಾರಸು ಮಾಡಲಾಗಿದೆ.
ಇನ್ನು ಯಾವದೇ ರೀತಿಯ ತೀವ್ರತರ ಗಾಯ ಹಾಗೂ ಗರಿಷ್ಠ ತೊಂದರೆಗೆ ಒಳಗಾಗುವ ಸಂತ್ರಸ್ತರಿಗೆ
(ಮೊದಲ ಪುಟದಿಂದ) ರೂ. 20 ಸಾವಿರದಿಂದ 1 ಲಕ್ಷ ಮೊತ್ತದ ವೈದ್ಯಕೀಯ ವೆಚ್ಚ ಭರಿಸಲು; ಸರಕಾರಿ ಆಸ್ಪತ್ರೆ ಅಥವಾ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ಕಳೆದ ಜುಲೈ 13ರಂದು ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಿರ್ಣಯದಂತೆ, ಭವಿಷ್ಯದಲ್ಲಿ ಎದುರಾಗಲಿರುವ ಯಾವದೇ ಆಕಸ್ಮಿಕ ದುರಂತ ವೇಳೆ, ಮೇಲಿನ ಮಾನದಂಡದಲ್ಲಿ ಜಿಲ್ಲಾಧಿಕಾರಿಗಳು ತುರ್ತು ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಈ ಆದೇಶವನ್ನು ಇದೇ ತಾ.1ರಂದು ರಾಜ್ಯಪಾಲರ ಆದೇಶದಂತೆ ಸರಕಾರದ ಕಂದಾಯ ಇಲಾಖೆ ಉಪಕಾರ್ಯದರ್ಶಿ ಟಿ. ನಾರಾಯಣಪ್ಪ ಹೊರಡಿಸಿದ್ದಾರೆ.