ಸೋಮವಾರಪೇಟೆ, ಫೆ. 3: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್.ಮೋಹನ್ ಅಧ್ಯಕ್ಷತೆಯಲ್ಲಿ ಭಾನುವಾರ ಕೊಡವ ಸಮಾಜದಲ್ಲಿ ನಡೆಯಿತು.

ಅಪಘಾತದಲ್ಲಿ ಮೃತಪಟ್ಟ ಹೊಸತೋಟದ ಆಟೋ ಚಾಲಕ ಗಣೇಶ್ ಅವರ ಪತ್ನಿ ಸವಿತ ಅವರಿಗೆ ಗುಂಪು ವಿಮೆಯ ಒಂದು ಲಕ್ಷ ರೂ.ನ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಠಾಣಾಧಿಕಾರಿ ಶಿವಶಂಕರ್ ಮಾತನಾಡಿ, ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾತ್ರಿ ಹೊತ್ತಿನಲ್ಲಿ ಮದ್ಯಪಾನ ಮಾಡಿ ಆಟೋ ಚಾಲನೆ ಮಾಡಬಾರದು. ಪ್ರಯಾಣಿಕರ ರಕ್ಷಣೆಯ ಜವಾಬ್ದಾರಿ ಚಾಲಕರದು ಎಂದು ಹೇಳಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಫಾರೂಕ್, ಕಾರ್ಯದರ್ಶಿ ಗಂಗಾಧರ್, ಖಜಾಂಚಿ ಮಹಮ್ಮದ್ ಶಭಿ, ಮಾಜಿ ಅಧ್ಯಕ್ಷ ಸಿ.ಡಿ.ನೆಹರು, ಗೌರವಾಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಸಲಹೆಗಾರರಾದ ಕೆ.ಪಿ.ರವೀಶ್ ಇದ್ದರು.