ಸೋಮವಾರಪೇಟೆ, ಫೆ. 2: ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ವತಿಯಿಂದ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಇಲ್ಲಿನ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅರಮೇರಿ-ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ‘ಶಕ್ತಿ’ ಪತ್ರಿಕೆಯ ಸಹ ಸಂಪಾದಕ ಚಿ.ನಾ. ಸೋಮೇಶ್, ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಕೆ. ರವಿ ಅವರುಗಳು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪ್ರಕೃತಿಯ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಶ್ವಮಾನವ ಕುವೆಂಪು ಶಾಲೆಯ ಸಿ.ಎನ್. ಗಗನ್ ಪ್ರಥಮ, ಓಎಲ್ವಿ ಶಾಲೆಯ ಬಿ.ಆರ್. ವರ್ಣ ದ್ವಿತೀಯ, ಶ್ರೇಯಸ್ ಶೆಟ್ಟಿ ಮತ್ತು ಸ.ಮಾ.ಪ್ರಾ. ಶಾಲೆಯ ಅಜ್ಮಲ್ ಖಾನ್ ತೃತೀಯ ಸ್ಥಾನ ಪಡೆದರು. ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ನಡೆದ ವಿವೇಕಾ ನಂದರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಓಎಲ್ವಿ ಶಾಲೆಯ ಹೆಚ್.ಕೆ. ಲಿಖಿತ್ ಪ್ರಥಮ, ವೀಕ್ಷಾ ದ್ವಿತೀಯ, ಜ್ಞಾನವಿಕಾಸ ಶಾಲೆಯ ಕೌಶಿಕ್, ಸಾಂದೀಪನಿ ಶಾಲೆಯ ತನು ಮಹೇಶ್, ಸಹಿಪ್ರಾ ಶಾಲೆಯ ಆಯ್ಸನ್ ರಿಕ್ಸಾನ ತೃತೀಯ ಸ್ಥಾನ ಗಳಿಸಿದರು.
ಪ್ರೌಢಶಾಲೆ ವಿಭಾಗದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಮೇಲೆ ರಾಮಕೃಷ್ಣ ಪರಮಹಂಸರ ಪ್ರಭಾವ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ಸಾಂದೀಪನಿ ಶಾಲೆಯ ಎಸ್. ಗಾನ ಪ್ರಥಮ, ಡಿ.ಜಿ. ಮೌನಿತ ದ್ವಿತೀಯ, ಸಂತ ಜೋಸೆಫರ ಶಾಲೆಯ ಡೆಲ್ವಿನ್ ಮೋರಸ್ ತೃತೀಯ ಬಹುಮಾನ ಪಡೆದರು. ಈ ಸಂದರ್ಭ ವಿವೇಕಾನಂದ ಜಯಂತ್ಯೋತ್ಸವ ಸಮಿತಿಯ ಕಾರ್ಯದರ್ಶಿ ಎಸ್. ಮಹೇಶ್, ಖಜಾಂಚಿ ಮೃತ್ಯುಂಜಯ ಉಪಸ್ಥಿತರಿದ್ದರು.