ಮಡಿಕೇರಿ, ಫೆ. 2: ಮಂಗನ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಕುರಿತು ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು.
ನಗರದ ಜಿಲ್ಲಾ ಪಂಚಾಯಿತಿ ಸಿಇಓ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿ.ಪಂ.ಸಿಇಒ ಅವರು ಜಿಲ್ಲೆಯಲ್ಲಿ ಮಂಗನ ಕಾಯಿಲೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸುವದು ಅಗತ್ಯ, ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ಅವರು ಸಲಹೆ ಮಾಡಿದರು.
ಆ ನಿಟ್ಟಿನಲ್ಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಮುತುವರ್ಜಿವಹಿಸುವದು ಅಗತ್ಯ. ಅರಣ್ಯ ಇಲಾಖೆ ಅಧಿಕಾರಿಗಳು ಮಂಗನ ಸಾವಿನ ಬಗ್ಗೆ ಪಶುಪಾಲನಾ ಇಲಾಖೆಗೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಅರಣ್ಯ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಸೇರಿದಂತೆ ಪ್ರತಿಯೊಬ್ಬರಿಗೂ ಮಂಗನ ಕಾಯಿಲೆ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿ.ಪಂ.ಸಿಇಒ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಜಗದೀಶ್ ಅವರು ಮಂಗನ ಕಾಯಿಲೆ ಸಂಬಂಧಿಸಿದಂತೆ ಯಾರೂ ಸಹ ಅತಂಕಪಡುವ ಅಗತ್ಯವಿಲ್ಲ, ಆದರೂ ಸಹ ಈ ಬಗ್ಗೆ ಅರಿವು ಇರಬೇಕು ಎಂದರು.
ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್ ಅವರು ಮಂಗನ ಕಾಯಿಲೆಗೆ ವೈರಾಣುಗಳು (ಪ್ಲೆವಿ ವೈರಸ್) ಕಾರಣವಾಗಿದೆ. ಇದು ಕಾಡಿನಲ್ಲಿರುವ ವೈರಾಣು ಪೀಡಿತ ಉಣ್ಣೆಗಳು ಕಚ್ಚುವದರಿಂದ ಮಾತ್ರ ಬರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಮಂಗನ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವದಿಲ್ಲ. ಕಾಡಿನಲ್ಲಿ ಮಂಗಗಳು ಸಾಯುವದೇ ಈ ಕಾಯಿಲೆಯ ಮುನ್ಸೂಚನೆ. ಸತತ ಎಂಟು-ಹತ್ತು ದಿನಗಳವರೆಗೆ ಬಿಡದೇ ಬರುವ ಜ್ವರ. ವಿಪರೀತ ತಲೆ ನೋವು, ಸೊಂಟ ನೋವು, ಕೈ ಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವದು. ಜ್ವರ ಬಂದ 2 ವಾರದ ನಂತರ ಮೂಗು, ಬಾಯಿ, ಗುದದ್ವಾರದಿಂದ ರಕ್ತಸ್ರಾವವಾಗಬಹುದು ಸನ್ನಿಪಾತ/ ಮೆದುಳಿನ ಹೊದಿಕೆಯ ಜ್ವರ ಲಕ್ಷಣಗಳು, ರೋಗದ ತೀವ್ರತೆ ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಲ್ಯಾಂಪ್ ಸೊಸೈಟಿ ಮೂಲಕ ಜಾಗೃತಿ ಮೂಡಿಸಲಾಗುವದು ಎಂದರು.
ಇನ್ನಷ್ಟು ಮಾಹಿತಿ:- ಮಂಗಗಳು ಸತ್ತ ಬಗ್ಗೆ ಗ್ರಾಮಸ್ಥರು/ ಸಾರ್ವಜನಿಕರು ಹತ್ತಿರದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಯವರಿಗೆ ಇಲ್ಲವೇ ಸಿಬ್ಬಂದಿಯವರಿಗೆ/ ಆಶಾ ಕಾರ್ಯಕರ್ತರಿಗೆ ಮಾಹಿತಿ ನೀಡುವುದು.
ಮಂಗ ಸತ್ತ ಹಾಗೂ ಸುತ್ತ ಮುತ್ತಲಿನ 5 ಕಿಮೀ ಪರಿಧಿಯಲ್ಲಿ ಅನಿವಾರ್ಯ ಕಾರಣದ ಹೊರತು ಜನ ಜಾನುವಾರಗಳ ಪ್ರವೇಶವನ್ನು ನಿರ್ಭಂದಿಸಬೇಕು. ಹೋಗಲೇ ಬೇಕಾದಲ್ಲಿ ಮೈತುಂಬಾ ಮುಚ್ಚುವ ಉಡುಗೆ ತೊಟ್ಟು ಇಲಾಖೆಯಿಂದ ಉಚಿತವಾಗಿ ವಿತರಿಸುವ ರೋಗವಾಹಕ ಉಣ್ಣೆಗಳ ವಿಕರ್ಷಕ ಡಿಎಂಪಿ ತೈಲದ ಲೇಪನವನ್ನು ಕೈಕಾಲಿಗೆ ಲೇಪಿಸಿ ಹೋಗಬೇಕು. ಕಾಡಿನಿಂದ ಬಂದ ನಂತರ ಸೋಪು ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ ಸೋಪು ಹಚ್ಚಿ ತೊಳೆಯಬೇಕು.
ಸತ್ತ ಮಂಗಗಳ ಮರಣೋತ್ತರ ಪರೀಕ್ಷೆಗೆ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡುವದು. ಸತ್ತ ಮಂಗಗಳ ಅವಶೇಷಗಳನ್ನು ವಿಡಿಎಲ್ಗೆ ಪರೀಕ್ಷೆಗಾಗಿ ಸಾಗಿಸುವದು.
ಸುತ್ತಮುತ್ತ ಇರುವ ಉಣ್ಣೆಗಳ ಸಂಗ್ರಹಣೆ ಮಾಡುವದು. ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಸತ್ತ ಮಂಗ ಅವಶೇಷಗಳನ್ನು ಸುಡುವದು. ಹಾಗೂ 50 ಮೀಟರ್ ಪರಿಧಿಯಲ್ಲಿ ಮೆಲಾಥಿಯನ್ ದ್ರಾವಣ ಸಿಂಪಡಿಸುವದು. ಇದನ್ನು ಆರೋಗ್ಯ ಇಲಾಖೆಯವರ ಉಸ್ತುವಾರಿಯಲ್ಲಿ ನಡೆಸುವದು.
ಚುಚ್ಚುಮದ್ದು: ಮಂಗನ ಕಾಯಿಲೆಗೆ ಲಸಿಕೆ ಲಭ್ಯವಿದ್ದು, ಈ ಲಸಿಕೆಯಿಂದ ಯಾವದೇ ದುಷ್ವರಿಣಾಮಗಳು ಇರುವದಿಲ್ಲ. ಈ ಲಸಿಕೆಯನ್ನು ಆರೋಗ್ಯವಂತನಾದ ವ್ಯಕ್ತಿ ಸರಿಯಾದ ಪ್ರಮಾಣದಲ್ಲಿ ಮೊದಲ ಮತ್ತು ಒಂದು ತಿಂಗಳ ಅಂತರದಲ್ಲಿ ಎರಡನೇ ವರಸೆಯನ್ನು ಲಸಿಕೆ ಪಡೆಯುವದು. 2ನೇ ಚುಚ್ಚುಮದ್ದು ಹಾಕಿಸಿಕೊಂಡು 30 ದಿನಗಳ ನಂತರವೇ ರೋಗ ನಿರೋಧಕ ಶಕ್ತಿ ಬರುತ್ತದೆ. ಪ್ರತಿ ವರ್ಷ ವರ್ಧಕ ಬೂಸ್ಟರ್, ಬಲ ವರ್ಧಕ ಲಸಿಕೆಯನ್ನು ಹಾಕಿಸಿಕೊಳ್ಳುವದು. ಗರ್ಭಿಣಿ ಸ್ತ್ರೀಯರು ಈ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬಾರದು.
ಗಮನಿಸಬೇಕಾದ ಮುಖ್ಯ ಅಂಶಗಳು:- ಈ ಕಾಯಿಲೆಗೆ ಲಸಿಕೆ ಹೊರತುಪಡಿಸಿ ನಿರ್ಧಿಷ್ಟವಾದ ಔಷಧಿ ಇರುವದಿಲ್ಲ. ಈ ಕಾಯಿಲೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಉಣ್ಣೆಗಳ ಮೂಲಕ ಹರಡುವದರಿಂದ ಇಂತಹುದೇ ನಿರ್ದಿಷ್ಟ ಸ್ಥಳಕ್ಕೆ ಕಾಯಿಲೆ ಬರುವದಾಗಿ ಹೇಳುವದು ಅಸಾಧ್ಯವಾದ ಕಾರಣ ಪ್ರತಿಯೊಬ್ಬರೂ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕು.
ಮಂಗನ ಕಾಯಿಲೆ ಪತ್ತೆಗೆ ಉಚಿತ ಪರೀಕ್ಷೆಯನ್ನು ಜಿಲ್ಲಾ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯ, ಶಿವಮೊಗ್ಗ (ವಿಡಿಎಲ್) ಇಲ್ಲಿ ಮಾಡಲಾಗುತ್ತದೆ. ದೂ.ಸಂಖ್ಯೆ-08182-222050. ಸಾರ್ವಜನಿಕರಿಗೆ ಮಂಗನ ಕಾಯಿಲೆಯ ಬಗ್ಗೆ ಸಹಾಯವಾಣಿಯ ಸಂಖ್ಯೆ 104 ಕರೆ ಮಾಡಿ.