ಕುಶಾಲನಗರ, ಫೆ. 2: ಕುಶಾಲನಗರದ ರೋಟರಿ ಇನ್ನರ್ ವೀಲ್ ಕ್ಲಬ್ ಮತ್ತು ವಾಸವಿ ಯುವತಿಯರ ಸಂಘದ ಆಶ್ರಯದಲ್ಲಿ ಪ್ಲಾಸ್ಟಿಕ್ ತ್ಯಜಿಸಿ, ಹೆಣ್ಣು ಸಂತತಿ ಉಳಿಸಿ ಬೆಳೆಸುವ ಕುರಿತಾದ ಜಾಗೃತಿ ಕಾರ್ಯಕ್ರಮ ನಡೆಯಿತು.
ಪಟ್ಟಣದ ಗಣಪತಿ ದೇವಾಲಯ ಮುಂಭಾಗದಿಂದ ಹೊರಟ ಜಾಗೃತಿ ಜಾಥಾಕ್ಕೆ ಡಿವೈಎಸ್ಪಿ ಮುರಳೀಧರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹೆಣ್ಣು ಸಂತತಿಯನ್ನು ಉಳಿಸಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಮುಖ್ಯವಾಹಿನಿಗೆ ತರುವದು ಅಗತ್ಯವಿದೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಪ್ರಜ್ಞಾವಂತ ನಾಗರಿಕರು ಚಿಂತನೆ ಹರಿಸಬೇಕಿದೆ ಎಂದರು.
ಸ್ಥಳೀಯ ಜೂನಿಯರ್ ಕಾಲೇಜಿನ ಸ್ಟುಡೆಂಟ್ ಪೊಲೀಸ್ ಕೆಡೆಟ್‍ಗಳು ಸೇರಿದಂತೆ ಸ್ಥಳೀಯ ಶಾಲೆಗಳ ನೂರಾರು ವಿದ್ಯಾರ್ಥಿಗಳು ವಿವಿಧ ಘೋಷಣೆಗಳನ್ನು ಒಳಗೊಂಡ ಜಾಗೃತಿ ಫಲಕಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಸಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭ ರೋಟರಿ ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಸುನಿತಾ ಮಹೇಶ್, ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಲಕ್ಷ್ಮಿ ರವಿಚಂದ್ರ, ಪಪಂ ಸದಸ್ಯೆ ರೂಪಾ ಉಮಾಶಂಕರ್, ರೋಟರಿ ಸಂಸ್ಥೆ ಅಧ್ಯಕ್ಷ ಜೇಕಬ್, ಪ್ರಮುಖರಾದ ಮಹೇಶ್ ನಾಲ್ವಡೆ, ಎಸ್ಪಿಸಿ ಅಧಿಕಾರಿ ಮಂಜುನಾಥ್ ಮತ್ತಿತರರು ಇದ್ದರು.