ಗೋಣಿಕೊಪ್ಪ ವರದಿ, ಫೆ. 2: ಇಲ್ಲಿನ ಕಾವೇರಿ ಪದವಿ, ಪದವಿಪೂರ್ವ ಕಾಲೇಜು ಹಾಗೂ ಕಾವೇರಿ ಎಜುಕೇಷನ್ ಸೊಸೈಟಿ ಸಹಯೋಗದಲ್ಲಿ ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಜಿಲ್ಲಾಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟವನ್ನು ತಾ. 6 ರಂದು ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್.ಆರ್. ಉಷಾಲತಾ ತಿಳಿಸಿದ್ದಾರೆ.

ತರಗತಿಯಿಂದ ಮೈದಾನಕ್ಕೆ ಎಂಬ ಘೋಷವಾಕ್ಯದೊಂದಿಗೆ ಕಾಲೇಜು ಸಿಬ್ಬಂದಿಗಳಲ್ಲಿ ಒತ್ತಡ ನಿವಾರಣೆಗೆ ಜಿಲ್ಲಾಮಟ್ಟದ ಅಂತರ್ ಪದವಿ, ಪದವಿಪೂರ್ವ ಹಾಗೂ ತಾಂತ್ರಿಕ ಕಾಲೇಜುಗಳ ಸಿಬ್ಬಂದಿಗಳಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ಥ್ರೋಬಾಲ್, ಪುರುಷ ಹಾಗೂ ಮಹಿಳೆಯರಿಗೆ ಷಟಲ್ ಬ್ಯಾಡ್‍ಮಿಂಟನ್ ಡಬಲ್ಸ್ ಕ್ರೀಡಾಕೂಟ ನಡೆಯಲಿದೆ. ಒಟ್ಟು 50 ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವದು. ಕಾಲೇಜು ವ್ಯಾಪ್ತಿಯಲ್ಲಿ ಅನ್ಯೋನ್ಯತೆ ಮೂಡಿಸಲು ಕಳೆದ 2 ವರ್ಷದಿಂದ ಕ್ರೀಡಾಕೂಟ ನಡೆಸಲಾಗುತ್ತಿದ್ದು, ಕ್ರೀಡೆ ಮೂಲಕ ಶೈಕ್ಷಣಿಕವಾಗಿ ಒಂದಷ್ಟು ಪ್ರೋತ್ಸಾಹ ಸಿಗುವಂತಾಗಿದೆ ಎಂದರು.

ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ನಮ್ಮ ಕಾಲೇಜಿನ ಬೋಧಕ ಸಿಬ್ಬಂದಿಗಳು ದಾನಿಗಳಾಗಿ ಬಹುಮಾನ ನೀಡುವ ಮೂಲಕ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಪ್ರಾಂಶುಪಾಲ ಎಸ್.ಆರ್. ಉಷಾಲತಾ ಹಾಗೂ ನಿವೃತ್ತ ಉಪನ್ಯಾಸಕ ಟಿ.ಎಂ. ದೇವಯ್ಯ ಪಾರಿತೋಷಕ ನೀಡಿದ್ದಾರೆ ಎಂದರು.

ತಾ. 4 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 7899147627, 9482948230, 9535709480 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.