ಮಡಿಕೇರಿ, ಫೆ. 2: ಪ್ರಸ್ತುತ ಕಾಲಘಟ್ಟದಲ್ಲಿ ಪುಸ್ತಕ ಓದುವಿಕೆಯ ಪ್ರಮಾಣ ಇಳಿಕೆಯಾಗುತ್ತಿದ್ದು, ಪುಸ್ತಕ ಓದುವಿಕೆ ಹೆಚ್ಚಿನ ಜ್ಞಾನವನ್ನು ನೀಡುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರ ಭೂಪತಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಯುವ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕಗಳ ಓದುವಿಕೆಯು ನಾಯಕತ್ವದ ಬೆಳವಣಿಗೆಗೆ ಪೂರಕವಾಗಿದೆ. ಓದುವಿಕೆಯು ಕವಿತೆ, ಕವನ ರಚನೆಗೆ ಪುಷ್ಠಿ ನೀಡುತ್ತದೆ ಎಂದರು.

ಕವಯಿತ್ರಿ ಸಂಗೀತಾ ರವಿರಾಜ್ ಮಾತನಾಡಿ ಕವಿತೆಗಾಗಿ ನಾವು ಕಾಯಬೇಕು, ಯುವ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮೌಲ್ಯಯುತ ಬರಹಗಳ ಕೊರತೆ ಇದೆ ಎಂದರು.

ಮಾಜಿ ಸಚಿವೆ, ಅಕ್ಕಮಹಾದೇವಿ ಅಧ್ಯಯನ ಪೀಠದ ಅಧ್ಯಕ್ಷರು ಲೀಲಾವತಿ ಆರ್.ಪ್ರಸಾದ್ ಮಾತನಾಡಿ ಭೌತಿಕ ವಿದ್ಯೆಯೊಂದಿಗೆ ಬದುಕಿನ ವಿದ್ಯೆಗೆ ಪುಸ್ತಕಗಳ ಓದುವಿಕೆ ಅತೀ ಅಗತ್ಯವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು “ನಮ್ಮ ಕೊಡಗು’-”ಅಮ್ಮನ ಆಸೆ”- ಮುಬೀನ ಎಂ.ಎಚ್, ”ಪ್ರಕೃತಿ ಮಾತೆ’-ರೇಖಾ ಎನ್, ”ನೇಗಿಲಯೋಗಿ”-ಸುಶ್ಮಿತಾ,” ನಮ್ಮ ಅನ್ನದಾತ’- ರೇಷ್ಮ, ಯುವ ಕವಿಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು. ಪ್ರಾಂಶುಪಾಲರು ಪ್ರಥಮ ದರ್ಜೆ ಮಹಿಳಾ ಕಾಲೇಜು ಮಡಿಕೇರಿ, ಡಾ.ಜೆನಿಫರ್ ಲೋಲಿಟಾ ಸಿ. ಉಪಸ್ಥಿತರಿದ್ದರು. ಡಾ.ಸರಸ್ವತಿ.ಡಿ.ಕೆ ಪ್ರಾಸ್ತಾವಿಕ ನುಡಿಯನ್ನಾಡಿದರು. ಸರಸ್ವತಿ ಸ್ವಾಗತಿಸಿದರು, ಕನ್ನಿಕ ವಂದಿಸಿದರು.