ಮಡಿಕೇರಿ, ಫೆ. 2: ‘ನಿಮಗೆ ಗಾಳಿಬೀಡಿನಿಂದ ನೀರು ಬೇಕು..., ಗಾಳಿಬೀಡು ಬೇಡ್ವಾ...?’ ಹೀಗೆಂದು ಪ್ರಶ್ನೆ ಮಾಡಿದವರು ಶಾಸಕ ಕೆ.ಜಿ. ಬೋಪಯ್ಯ ಅವರು. ಮಡಿಕೇರಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಂದರ್ಭ ಪೈಪ್ಲೈನ್ ಅಳವಡಿಸಲು ರಸ್ತೆ ಬಗೆದು ದುರಸ್ತಿ ಪಡಿಸಿಕೊಡದೇ ಇರುವದರಿಂದ ಗಾಳಿಬೀಡು ಪಂಚಾಯಿತಿ ಹಾಗೂ ಮಡಿಕೇರಿ ನಗರಸಭೆ ನಡುವೆ ಏರ್ಪಟ್ಟಿರುವ ಶೀಥಲ ಸಮರದ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪಿಸಿ, ನಗರಸಭಾ ಆಯುಕ್ತರಿಗೆ ಸ್ಪಷ್ಟ ಸೂಚನೆ ನೀಡಿದರು.ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿಂದು ಇಲ್ಲಿನ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ನಡೆದ ಮಡಿಕೇರಿ ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರಸಭೆಯ ಕಾರ್ಯಪ್ರಗತಿ ಬಗ್ಗೆ ಪ್ರಸ್ತಾವನೆ ಬಂದಿತು. ಈ ಸಂದರ್ಭದಲ್ಲಿ ಶಾಸಕರು ‘ಗಾಳಿಬೀಡಿನ ಸಮಸ್ಯೆ ಏನಾಯಿತು; ಅದನ್ನು ಸರಿಪಡಿಸಿ ಕೊಳ್ಳೋದು ತಾನೆ...?’ ಎಂದು ಆಯುಕ್ತ ರಮೇಶ್ ಅವರಲ್ಲಿ ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಆಯುಕ್ತರು ‘ಇದು ಒಳಚರಂಡಿ ಮಂಡಳಿಯವರು ಮಾಡಬೇಕಿದೆ’ ಎಂದು ಉತ್ತರಿಸಿದರು. ಈ ಸಂದರ್ಭ ಕುಪಿತರಾದ ಬೋಪಯ್ಯ ಅವರು ‘ನಿಮಗೆ ಗಾಳಿಬೀಡಿನ ನೀರು ಬೇಕು; ಗಾಳಿಬೀಡು ಬೇಡ್ವಾ...? ಜನರು ಓಡಾಡುವ ರಸ್ತೆ ಅಗೆದು ಹಾಳು ಮಾಡಿದ್ದೀರಿ. ಊರಿನವರಿಗೆ ತೊಂದರೆ ಕೊಡುತ್ತಿದ್ದೀರಿ. ವಿನಾ ಕಾರಣ ಗ್ರಾಮದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡು ತ್ತಿದ್ದೀರಾ’ ಎಂದು ಕಿಡಿಕಾರಿದರು. ‘ಪೈಪ್ಲೈನ್ ಹಾಗೂ ವಿದ್ಯುತ್ ಮಾರ್ಗ ನಿರ್ವಹಣೆ ಯಾರು ಮಾಡೋದು...?’ ಎಂದು ಪ್ರಶ್ನಿಸಿದಾಗ, ‘ಅದು ನಾವೇ ಮಾಡಬೇಕು’ ಎಂದು ಆಯುಕ್ತರು ಹೇಳಿದರು. ‘ಹಾಗಾದರೆ ಅದನ್ನು ನಿರ್ವಹಣೆ ಮಾಡಲು ನಿಮಗೂ ಓಡಾಡಲು ರಸ್ತೆ ಬೇಡ್ವಾ...? ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಪರಿಹಾರ ಮಾಡಿ; ಇದನ್ನು ಗಂಭೀರವಾಗಿ ಪರಿಗಣಿಸ ಬೇಕು; ಇನ್ನೇನು ನೀರಿನ ಸಮಸ್ಯೆ ಕೂಡ ಕಾಡಲಿದೆ; ಗ್ರಾಮಸ್ಥರು ಅಡ್ಡಗಟ್ಟಿದರೆ ಮತ್ತೆ ಸಮಸ್ಯೆ ಯಾಗಲಿದೆ. ಆದಷ್ಟು ಶೀಘ್ರ ಜಿಲ್ಲಾಧಿ ಕಾರಿಗಳೊಂದಿಗೆ ಚರ್ಚಿಸಿ, ರಸ್ತೆ ಸರಿಪಡಿಸಿಕೊಳ್ಳಿ’ ಎಂದು ಸೂಚನೆ ನೀಡಿದರು. ಆಯುಕ್ತರು ಸಮ್ಮತಿ ಸೂಚಿಸಿದರು.
(ಮೊದಲ ಪುಟದಿಂದ)
ಹಿನ್ನೆಲೆ
ಹಿಂದೆ ಕುಂಡಾಮೇಸ್ತ್ರಿ ಹೊಳೆಯಿಂದ ಮಡಿಕೇರಿಗೆ ನೀರು ಸರಬರಾಜು ಮಾಡಲು ಪೈಪ್ಲೈನ್ ಅಳವಡಿಸುವ ಸಂದರ್ಭ ಮುಖ್ಯರಸ್ತೆಗಾಗಿ ದೂರ ಹೆಚ್ಚಾಗಲಿದೆ. ಅಲ್ಲದೆ, ಡಾಂಬರು ರಸ್ತೆ ಹಾಳಾಗಲಿದೆ ಎಂಬ ಕಾರಣಕ್ಕಾಗಿ ಗ್ರಾಮಸ್ಥರ ಮನವೊಲಿಸಿ ಹತ್ತಿರವೆನಿಸುವ ಕಚ್ಚಾರಸ್ತೆ ಮೂಲಕ ಪೈಪ್ ಅಳವಡಿಸಲಾಗಿದೆ. ಸುಸಜ್ಜಿತವಾಗಿದ್ದ, ಕಾಂಕ್ರೀಟ್ ಗಿಂತಲೂ ಗಟ್ಟಿಮುಟ್ಟಾಗಿದ್ದ ಕಚ್ಚಾ ರಸ್ತೆಯನ್ನು ಅಗೆಯುವ ಸಂದರ್ಭ ಮುಂದಕ್ಕೆ ಡಾಂಬರು ರಸ್ತೆ ಮಾಡಿಕೊಡುವ ಬಗ್ಗೆ ಒಪ್ಪಂದವಾಗಿತ್ತು. ಶಾಸಕರು, ನಗರಸಭಾ ಆಯುಕ್ತರು, ಅಧಿಕಾರಿಗಳ ಸಮ್ಮುಖದಲ್ಲೇ ಮಾತುಕತೆ ನಡೆದಿತ್ತು. ಆದರೆ ಪೈಪ್ಲೈನ್ ಅಳವಡಿಸಿದ ಬಳಿಕ ಒಳಚರಂಡಿ ಮಂಡಳಿಯವರು ರಸ್ತೆಯನ್ನು ಸರಿಯಾಗಿ ಮುಚ್ಚದೆ ಹಾಗೆ ಬಿಟ್ಟು ಹೋಗಿದ್ದಾರೆ. ಇದರಿಂದಾಗಿ ಮಳೆಗಾಲದಲ್ಲಿ ರಸ್ತೆ ಹಾಳಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.
ಇತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ನೀಡಿದ ಭರವಸೆಯೂ ಹುಸಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಗಿಳಿದಿದ್ದಾರೆ. ಮಡಿಕೇರಿಗೆ ಸರಬರಾಜಾಗುವ ನೀರನ್ನು ತಡೆಹಿಡಿಯಲು ಮುಂದಾಗಿದ್ದಾರೆ. ಈ ಬಗ್ಗೆ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಮಸ್ಯೆ ಬಿಗಡಾಯಿಸಿದೆ..., ಬಗೆಹರಿಸುವವರು ಯಾರೂ ಇಲ್ಲವೆಂಬಂತಾಗಿದೆ; ಮುಂದುವರಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ...; ಇತ್ತ ನಗರವಾಸಿಗಳೂ ಪ್ರತಿಭಟನೆಗೆ ಇಳಿದರೂ ಅತಿಶಯೋಕ್ತಿ ಯಾಗಲಾರದು...
-ಸಂತೋಷ್.