ಶನಿವಾರಸಂತೆ, ಫೆ. 2: ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಶಾಂತವೇರಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೂ. 1 ಲಕ್ಷ ಮೌಲ್ಯದ 2 ಹೊನ್ನೆ ಮರ ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ದೊರೆತ ಮಾಹಿತಿ ಮೇರೆಗೆ ಡಿವೈಎಸ್ಪಿ ಮುರುಳೀಧರ್ ಮಾರ್ಗದರ್ಶನ ದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ, ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿ ಧಾಳಿ ನಡೆಸಿ ಮರವನ್ನು ವಶಪಡಿಸಿಕೊಂಡಿದ್ದಾರೆ.
ಶಾಂತವೇರಿ ಗ್ರಾಮದ ದೇವಪ್ಪ ಅವರ ಕಾಫಿ ತೋಟದಲ್ಲಿ ಶಾಂತವೇರಿ ಗ್ರಾಮದ ಅಬು ಕುಂಜ್ಞ ಇವರಿಬ್ಬರು ಆರೋಪಿಗಳು ಸೇರಿ 2 ಹೊನ್ನೆ ಮರಗಳನ್ನು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರು ಧಾಳಿ ನಡೆಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ಎನ್.ಆರ್. ಹರೀಶ್, ವಸಂತ್, ಮಂಜುನಾಥ, ಕುಮಾರಸ್ವಾಮಿ, ಶಶಿಕಲಾ, ಪ್ರದೀಪ್ ಕುಮಾರ್, ಶಫೀರ್ ಪಾಲ್ಗೊಂಡಿದ್ದರು.