ವೀರಾಜಪೇಟೆ, ಫೆ. 2: ನೀರಿನ ಸಮಸ್ಯೆಗಳಿದ್ದ ಕಡೆಗಳಲ್ಲಿ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕೆಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಬಳಿಯ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಬರ್ ಕಾಫಿ ಮಿಲ್ ಪಕ್ಕದ ಮಾದಂಡ ರಸ್ತೆಯಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೊಡಗು ಜಿಲ್ಲಾ ಪಂಚಾಯಿತಿಯಿಂದ ರೂ. 2 ಲಕ್ಷ ವೆಚ್ಚದಲ್ಲಿ ನೂತನ ಬೋರ್‍ವೆಲ್‍ಗೆ ಚಾಲನೆ ನೀಡಿದ ಬೋಪಯ್ಯ ಅವರು, ಕೊಡಗು ಜಿಲ್ಲೆಯನ್ನು ಈಗಾಗಲೇ ಬರಪೀಡಿತ ಜಿಲ್ಲೆ ಎಂದು ಗುರುತಿಸಲಾಗಿದ್ದು, ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕಾಗಿದೆ ಎಂದರು.
ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಮುಕೊಂಡ ಶಶಿ ಸುಬ್ರಮಣಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಜಿಲ್ಲಾ ಪಂಚಾಯಿತಿ ವತಿಯಿಂದ ನೂತನ ಬೋರ್‍ವೆಲ್ ಹಾಗೂ ವಿದ್ಯುತ್ ಸಂಪರ್ಕಕ್ಕೆ ನೂತನ ಟ್ರಾನ್ಸ್‍ಪಾರಂ ಅಳವಡಿಸಿ ಕದನೂರು ಮತ್ತು ಕೆ. ಬೊಯಿಕೇರಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯರಾದ ಆಲತಂಡ ಸೀತಮ್ಮ, ಮಾಳೇಟಿರ ಪ್ರಶಾಂತ್ ಉತ್ತಪ್ಪ, ಕದನೂರು ಗ್ರಾಮ ಪಂಚಾಯಿತಿ ಸಧ್ಯಕ್ಷೆ ಹೆಚ್.ಎನ್. ಶೋಭ, ಉಪಾಧ್ಯಕ್ಷೆ ತಟ್ಟಂಡ ರಾಣಿ ಸರಸ್ವತಿ, ಸದಸ್ಯರಾದ ಪಿ. ವಾಣಿ, ಕೆ.ಬಿ. ದೇವಯ್ಯ, ಮಹ್ಮದ್ ಹನೀಪ್, ಮಾಜಿ ಸದಸ್ಯರಾದ ಎ.ಎಂ. ರಾಜ ನಂಜಪ್ಪ, ಕೆ.ಎಂ. ಧನು ಬೋಪಣ್ಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಜಿ. ಪೂಣಚ್ಚ, ಎಂ.ಆರ್. ರವಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಮಲ್ಲಂಡ ಮದು ದೇವಯ್ಯ, ಜೋಕಿಂ ರಾಡ್ರಿಗಾಸ್, ವಿಷ್ಣು ಹಾಗೂ ಗ್ರಾಮಸ್ಥರು ಇದ್ದರು.