ಮಡಿಕೇರಿ, ಫೆ. 2: ಮಡಿಕೇರಿ ಕಂದಾಯ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳ ವರ್ತನೆ ಬಗ್ಗೆ ತೀರಾ ಅಸಮಾಧಾನದೊಂದಿಗೆ ಅಕ್ರೋಶದ ನುಡಿಯಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಅಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಆಗಮಿಸಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ನಡೆದ ತಾ.ಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎದುರಾಯಿತು.ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಎಸ್‍ಜಿ ಎಸ್‍ವೈ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ಕಂದಾಯ ಇಲಾಖೆ ಪ್ರಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಸಂದರ್ಭ ತಹಶೀಲ್ದಾ ರರನ್ನುದ್ದೇಶಿಸಿ ಮಾತನಾಡಿದ ಶಾಸಕರು, ಕಂದಾಯ ಕಚೇರಿಯಲ್ಲಿನ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರ ವರ್ತನೆ ಮಿತಿ ಮೀರಿದೆ. ಸಾಮಾನ್ಯ ಜನರ ಸಮಸ್ಯೆ ಆಲಿಸುವ ಕೊಂಚ ಸೌಜನ್ಯ ಕೂಡ ಅವರುಗಳಲಿಲ್ಲ. ಗ್ರಾಮ ಲೆಕ್ಕಿಗರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಕಂದಾಯ ನಿರೀಕ್ಷಕರುಗಳಂತೂ ತಾವೇ ಜಿಲ್ಲಾಧಿಕಾರಿಗಳಿಗಿಂತ ಮೇಲೆ ಎಂಬಂತೆ ವರ್ತಿಸುತ್ತಾರೆ. ಅವರವರಿಗಿರುವ ಮಿತಿಯಲ್ಲಿ ಕೆಲಸ ಮಾಡಿಕೊಂಡು ಹೋಗುವದು ಒಳಿತೆಂದು ಎಚ್ಚರಿಸಿದರು. ಇಂತಹ ಅಧಿಕಾರಿಗಳಿಂದ ತಹಶೀಲ್ದಾರರಿಗೂ ಕೆಟ್ಟ ಹೆಸರು ಬರುತ್ತದೆ. ತಾವುಗಳು ಈ ಬಗ್ಗೆ ಗಮನ ಹರಿಸಿ ಕೆಳಮಟ್ಟದ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟು ಕೊಳ್ಳಬೇಕೆಂದು ಸೂಚನೆ ನೀಡಿದರು.

ಗಂಭೀರತೆ ಇರಲಿ: ಮನೆ ಕಳೆದುಕೊಂಡು ಸಂತ್ರಸ್ತರಾಗಿರುವವರ ಬಗ್ಗೆ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಈ ಬಗ್ಗೆ ನಿನ್ನೆ ಚರ್ಚೆ ಆಗಿದೆ. ಭೂಕುಸಿತಕ್ಕೊಳ ಗಾಗಿರುವ ಗ್ರಾಮಗಳು ಮಾತ್ರವಲ್ಲದೆ ಇತರ ಕಡೆಗಳಲ್ಲೂ ಮಳೆ-ಗಾಳಿಗೆ ಮನೆಗಳು ಕುಸಿದು ಬಿದ್ದಿವೆ. ಎಲ್ಲವನ್ನೂ ಸಮರ್ಪಕವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸ ಬೇಕಿದೆ ಎಂದು ಕಂದಾಯಾಧಿಕಾರಿ ಗಳಿಗೆ ಸೂಚನೆ ನೀಡಿದರು.

ಆದಾಯ ಪತ್ರ ನೀಡಿ: ಆದಾಯ ದೃಢೀಕರಣ ಪತ್ರ ನೀಡುವ ಸಂಬಂಧ ಅಧಿಕಾರಿಗಳು ನಿಯಮಾವಳಿಗಳನ್ನು ಹೇರುತ್ತಿದ್ದು, ಇದರಿಂದ ಬಡ ವರ್ಗದವರಿಗೆ ಮನೆ ಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ. ಸರಕಾರದ ನಿಯಮ ಪಾಲಿಸಬೇಕಿದೆ. ಆದರೂ ಮಾನವೀಯ ದೃಷ್ಟಿಯಿಂದ ಸಡಿಲಿಕೆ ಮಾಡಿ, ಆದಷ್ಟು ಬೇಗ ಮಾಡಿಕೊಡುವಂತೆ ಶಾಸಕರು ಅಧಿಕಾರಿಗಳಲ್ಲಿ ವಿನಂತಿಸಿದರು.

ಆರ್‍ಟಿಸಿ ಮಾಡಿಸಿ: ದಾನಿಗಳು ಸರಕಾರಿ ಶಾಲೆಗಳಿಗೆ ದಾನ ನೀಡಿರುವ ಜಾಗಗಳಿಗೆ ಆರ್‍ಟಿಸಿ ಆಗಿದೆಯೇ? ಎಂದು ಶಾಸಕರು ಸಭೆಯಲ್ಲಿ ಪ್ರಶ್ನಿಸಿದರು. ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು 36 ಶಾಲೆಗಳ ಜಾಗಗಳಿಗೆ ಆರ್‍ಟಿಸಿ ಆಗಿಲ್ಲ. ದಾನ ನೀಡಿರುವದಕ್ಕೆ ದಾನ ಪತ್ರಗಳಿಲ್ಲವೆಂದು ಮಾಹಿತಿ ನೀಡಿದರು. ಪ್ರತಿಕ್ರಿಯಿಸಿದ ಶಾಸಕರು, ದಾನಿಗಳು ಬಹಳ ಹಿಂದಿನ ಕಾಲದಲ್ಲಿ ದಾನ ನೀಡಿದ್ದು, ಪತ್ರಗಳಿರುವದಿಲ್ಲ. ದಾನಿಗಳು ಈಗ ಇಲ್ಲ ಹಾಗೂ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ,

(ಮೊದಲ ಪುಟದಿಂದ) ದಾಖಲಾತಿ ಮಾಡಿಸಿಕೊಳ್ಳುವಂತೆ ಸೂಚಿಸಿದರು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ತಯಾರಿ ಮಾಡಿಕೊಳ್ಳುವಂತೆ ಹೇಳಿದರು.

ಸ್ಮಶಾನ-ಕಟ್ಟಡ: ಎಲ್ಲ ಗ್ರಾ.ಪಂ.ಗಳಲ್ಲಿಯೂ ಗ್ರಾ.ಪಂ. ಸ್ವಂತ ಕಟ್ಟಡ-ಸ್ಮಶಾನಗಳಿರಬೇಕೆಂಬ ನಿಯಮವಿದೆ. ಎಲ್ಲ ಗ್ರಾ.ಪಂ.ಗಳಲ್ಲಿ ಇದೆಯೇ ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು ಗ್ರಾ.ಪಂ. ಅಧ್ಯಕ್ಷರುಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಅವರು ಹೊಸದಾಗಿ ರಚನೆಯಾಗಿರುವ ನಾಲ್ಕು ಗ್ರಾ.ಪಂ.ಗಳಲ್ಲಿ ಕಟ್ಟಡ ನಿರ್ಮಾಣವಾಗಬೇಕಿದೆ ಎಂದು ಮಾಹಿತಿ ನೀಡಿದರು. ವಿವಿಧ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು ಆಯಾ ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣ, ಸ್ಮಶಾನ ಹಾಗೂ ಕಸ ವಿಲೇವಾರಿ ಜಾಗದ ಬಗೆಗಿನ ಸಮಸ್ಯೆ, ಅಡ್ಡಿ, ಕೆಲವೆಡೆ ಸರ್ವೆ ಕಾರ್ಯ ಆಗದಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಶಾಸಕರು, ಯಾವ ಪಂಚಾಯಿತಿಯಲ್ಲಿಯೂ ಇನ್ನು ಸರ್ವೆ ಕೂಡ ಆಗಿಲ್ಲ. ಇನ್ನು ಯಾವಾಗ ಆಗೋದು ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.

ಭತ್ತ ಕೇಂದ್ರವಿಲ್ಲ..!: ಕೇಂದ್ರ ಸರಕಾರ ಭತ್ತಕ್ಕೆ ರೂ. 1,750 ಬೆಂಬಲ ಬೆಲೆ ಘೋಷಿಸಿದ್ದರೂ, ಆಹಾರ ಇಲಾಖೆ ವತಿಯಿಂದ ಭತ್ತ ಖರೀದಿ ಕೇಂದ್ರ ತೆರೆಯಲು ಸಾಧ್ಯವಾಗದಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನಲ್ಲಿ 72 ಮಂದಿ ರೈತರು ಮಾತ್ರ ನೋಂದಣಿ ಮಾಡಿಕೊಂಡಿರುವ ಬಗ್ಗೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದಾಗ, ಕೇಂದ್ರ ತೆರೆಯಲಾಗದ ಬಗ್ಗೆ ಮಾಹಿತಿ ನೀಡುವಂತೆ ಶಾಸಕರು ಹೇಳಿದರು. ಸಮರ್ಪಕ ಉತ್ತರ ದೊರಕದಿದ್ದಾಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ 10 ಸಾವಿರ ಮಂದಿ ರೈತರಿದ್ದರೂ, ಕೇವಲ 72 ಮಂದಿ ಮಾತ್ರ ನೋಂದಾಯಿಸಿಕೊಂಡಿದ್ದು, ಅಧಿಕಾರಿಗಳ ಕ್ರಮದ ಬಗ್ಗೆ ಆಕ್ಷೇಪಿಸಿದರು.

ತೋಟಗಾರಿಕೆ ಇಲಾಖಾಧಿಕಾರಿ ಸಮರ್ಪಕ ಮಾಹಿತಿ ನೀಡಲು ತಡವರಿಸಿದಾಗ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕಿತ್ತಳೆ, ಕಾಳುಮೆಣಸು ಸಸಿಗಳ ವಿತರಣೆ ಹೊರತುಪಡಿಸಿದರೆ ಮತ್ತೇನು ಪ್ರಗತಿಯಾಗದ ಬಗ್ಗೆ ಆಕ್ಷೇಪಿಸಿದರಲ್ಲದೆ, ‘ಈ ರೀತಿಯ ಕೆಲಸ ಇಲ್ಲಿ ನಡೆಯುವದಿಲ್ಲ’ ಎಂದು ಎಚ್ಚರಿಸಿದರು.

ಜಾನುವಾರುಗಳ ಮೇವಿಗಾಗಿ ಹುಲ್ಲು ಖರೀದಿ ಕೇಂದ್ರವನ್ನು ಕೂಡ ತೆರೆಯದಿರುವ ಬಗ್ಗೆ ಪಶು ಸಂಗೋಪನಾ ಇಲಾಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಕೆಲಸ ಮಾಡದೆ, ಮಾಹಿತಿ ಇಲ್ಲದೆ ಯಾಕೆ ಬರುತ್ತೀರಿ ಸಭೆಗೆ...?’ ಎಂದು ಪ್ರಶ್ನಿಸಿದರು.

ಇನ್ನುಳಿದಂತೆ ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಪರಿಶೀಲಿಸಲಾಯಿತು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೊಡಪಾಲು ಗಣಪತಿ, ತಹಶೀಲ್ದಾರ್ ಕುಸುಮ ಇದ್ದರು. ತಾ.ಪಂ. ಇ.ಓ. ಲಕ್ಷ್ಮಿ ಸ್ವಾಗತಿಸಿದರು.