ಸೋಮವಾರಪೇಟೆ,ಜ.28: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ವೀರ ಸೇನಾನಿ ಫೀ. ಮಾ. ಕಾರ್ಯಪ್ಪರವರ 120ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಕಚೇರಿ ಮುಂಭಾಗದಲ್ಲಿ ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಬಿ.ಆರ್. ಈರಪ್ಪ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ದೇಶ ಕಂಡ ಅಪ್ರತಿಮ ವೀರ ಸೇನಾನಿ ಕಾರ್ಯಪ್ಪರವರು ಇಂದಿಗೂ ಜನಮಾನಸದಲ್ಲಿ ಅಮರರಾಗಿದ್ದಾರೆ. ಅವರ ತತ್ವ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳುವ ಮೂಲಕ ಬಲಷ್ಠ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕೆಂದರು.
ಈ ಸಂದರ್ಭ ಸಂಘದ ಕಾರ್ಯದರ್ಶಿ ಆರ್.ಜಿ. ಬಸಪ್ಪ, ಖಜಾಂಚಿ ಎಂ.ಕೆ. ಸುಕುಮಾರ್, ಪದಾಧಿಕಾರಿಗಳಾದ ಸಿ.ಎಂ. ತಮ್ಮಯ್ಯ, ಶಿವಪ್ಪ, ಎಚ್.ಓ. ಬೋಪಯ್ಯ, ಹರೀಶ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.