ಮಡಿಕೇರಿ, ಜ. 28: ಸರ್ವದೈವತ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಹಾಗೂ ಕಾಲೇಜು ವಿಭಾಗದ ಮಕ್ಕಳಿಗೆ ವಿಜ್ಞಾನ, ಗಣಿತ ಹಾಗೂ ಆಟ್ರ್ಸ್ ಮತ್ತು ಕ್ರಾಫ್ಟ್ ಪ್ರದರ್ಶನ ಮತ್ತು ಪೋಷಕರಿಗೆ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಗೋಣಿಕೊಪ್ಪಲು ಠಾಣಾಧಿಕಾರಿ ಬಿ.ಎಸ್. ಶ್ರೀಧರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಪೋಷಕರು ತಮ್ಮ ಕೆಲಸಗಳ ನಡುವೆಯೂ ಸಮಯ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕೆಂದರು. ತಾ. 26 ರಂದು ಗಣರಾಜ್ಯೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಬೇಸಂಟ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಸುಲೋಚನಾ ನಾರಾಯಣ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಳೆದ 2017-18ನೇ ಸಾಲಿನಲ್ಲಿ ಎಲ್‍ಕೆಜಿಯಿಂದ ದ್ವಿತೀಯ ಪಿಯುಸಿಯವರೆಗೆ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಛಾಯಾಗ್ರಾಹಕ ಶಿವಣ್ಣ ಅವರನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಮೊಣ್ಣಪ್ಪ, ಪ್ರಾಂಶುಪಾಲೆ ಲಲಿತಾ ಮೊಣ್ಣಪ್ಪ, ಆಡಳಿತಗಾರ ಆದಿತ್ಯ ಅಯ್ಯಪ್ಪ, ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ್ ಉಪಸ್ಥಿತರಿದ್ದರು.