ಮರಗೋಡು, ಜ. 29 : ಮರಗೋಡು ಸಮೀಪದ ಹೊಸ್ಕೇರಿ ಗ್ರಾಮ ಇದೀಗ ಪ್ರತಿನಿತ್ಯ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಅರೆ, ಈ ಗ್ರಾಮದಲ್ಲಿ ಏನಪ್ಪಾ ಇದೆ ಅಂತಹದ್ದು ಅಂತೀರಾ? ಇಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ಕೇಳಿದರೆ, ಅಬ್ಬಿಫಾಲ್ಸ್ ವೀಕ್ಷಿಸಲು ಬಂದಿದ್ದೇವೆ ಅಂತಾರೆ ಸ್ಟೈಲಲ್ಲಿ. ಹೊಸ್ಕೇರಿ ಗ್ರಾಮದಲ್ಲಿ ಅಬ್ಬಿಫಾಲ್ಸಾ? ಅಂತ ಆಶ್ಚರ್ಯದಿಂದ ಅವರನ್ನು ಎಚ್ಚರಿಸಿದರೆ, ಹೌದು ಅಬ್ಬಿಫಾಲ್ಸ್ ಇಲ್ಲೇ ಇರೋದು ನೋಡಿ ಬೇಕಾದರೆ ಅಂತ ಮೊಬೈಲ್ನಲ್ಲಿ ಗೂಗಲ್ ಮ್ಯಾಪ್ ತೋರಿಸುತ್ತಾರೆ. ಅಲ್ಲಿಗೆ ಬೇಸ್ತು ಬೀಳುವ ಸರದಿ ಹೊಸ್ಕೇರಿ ಗ್ರಾಮಸ್ಥರದ್ದು...! ಇದು ಒಂದಿಬ್ಬರು ಪ್ರವಾಸಿಗರ ಕತೆ ಅಲ್ಲ ಪ್ರತಿನಿತ್ಯ ಈ ಗ್ರಾಮಕ್ಕೆ 50ಕ್ಕೂ ಅಧಿಕ ಪ್ರವಾಸೀ ವಾಹನಗಳು ಆಗಮಿಸುತ್ತವೆ. ವಾರಾಂತ್ಯದಲ್ಲಂತೂ ಪ್ರವಾಸಿ ವಾಹನಗಳ ಸಂಖ್ಯೆ 200 ದಾಟುತ್ತವೆ.
ಹೊಸ್ಕೇರಿ ಜಂಕ್ಷನ್ನಿಂದ ಕುಟ್ಟಿಚಾತ ದೇವಸ್ಥಾನಕ್ಕೆ ತೆರಳುವ ಹಾದಿಯಲ್ಲಿ ಒಂದಷ್ಟು ದೂರ ತೆರಳಿ ಸುತ್ತಾಡಿ ಮತ್ತೆ ಮುಖ್ಯರಸ್ತೆಗೆ ಆಗಮಿಸುತ್ತಾರೆ. ಬಳಿಕ ಅಲ್ಲಿದ್ದವರನ್ನು ಇಲ್ಲಿ ಅಬ್ಬಿಫಾಲ್ಸ್ ಎಲ್ಲಿ ಬರುತ್ತದೆ ಎಂದು ಕೇಳುತ್ತಾರೆ. ಕೊನೆಗೆ ಗ್ರಾಮಸ್ಥರು ಅಬ್ಬಿಫಾಲ್ಸ್ ಇಲ್ಲಿ ಬರುವದಿಲ್ಲ, ಅದು ಮಡಿಕೇರಿ ಸಮೀಪ ಇದೆ ಅಲ್ಲಿಗೆ ತೆರಳಿ ಎಂದು ಮಾಹಿತಿ ನೀಡಿ ಪ್ರವಾಸಿಗರನ್ನು ಕಳುಹಿಸುತ್ತಿದ್ದಾರೆ. ಆದರೆ ಕೆಲವು ಪ್ರವಾಸಿಗರಂತೂ ಗ್ರಾಮಸ್ಥರ ಮಾತನ್ನು ನಂಬದೆ ಮತ್ತೆ ಕುಟ್ಟಿಚಾತ ದೇವಸ್ಥಾನದ ಬಳಿ ತೆರಳಿ ಅಬ್ಬಿ ಜಲಪಾತಕ್ಕಾಗಿ ಹುಡುಕಾಡುತ್ತಾರೆ.
ಕಳೆದ ಮೂರು, ನಾಲ್ಕು ತಿಂಗಳಿನಿಂದ ಈ ಗ್ರಾಮದಲ್ಲಿ ಇಂತಹ ಒಂದು ಬೆಳವಣಿಗೆಯಾಗುತ್ತಿದೆ. ಆರಂಭದಲ್ಲಿ ಗ್ರಾಮಸ್ಥರು, ಪ್ರವಾಸಿಗರು ಬಹುಶಃ ದಾರಿ ತಪ್ಪಿ ಬಂದಿದ್ದಾರೆ ಎಂದುಕೊಂಡಿದ್ದರು. ಆದರೆ ಬರಬರುತ್ತಾ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಏನೋ ಎಡವಟ್ಟಾಗಿದೆ ಎಂಬದನ್ನು ಅರಿತುಕೊಂಡು ಪ್ರವಾಸಿಗರನ್ನೇ ವಿವರವಾಗಿ ಕೇಳಿದಾಗ ಎಲ್ಲರ ಬಾಯಲ್ಲೂ ಬಂದ ಉತ್ತರ ಒಂದೇ. ಗೂಗಲ್ ಮ್ಯಾಪ್ನಲ್ಲಿ ಅಬ್ಬಿಫಾಲ್ಸ್ ಹೊಸ್ಕೇರಿ ಗ್ರಾಮದಲ್ಲಿ ತೋರಿಸುತ್ತಿದೆ ಎಂಬದು.
ಗೂಗಲ್ ಮ್ಯಾಪ್ ಎಡವಟ್ಟು
ಗೂಗಲ್ ಮ್ಯಾಪ್ನಲ್ಲಿ ಅಬ್ಬಿಫಾಲ್ಸ್ ಎಂದು ಶೋಧಿಸಿ ನೋಡಿದರೆ, ಪ್ರವಾಸಿಗರು ಹೇಳಿದ್ದು ನಿಜವಾಗಿದೆ. ಹೊಸ್ಕೇರಿ ಗ್ರಾಮದ ಕುಟ್ಟಿಚಾತ ದೇವಸ್ಥಾನ ರಸ್ತೆಯಲ್ಲಿ ಅಬ್ಬಿಫಾಲ್ಸ್ ಇದೆ ಎಂದು ಮ್ಯಾಪ್ ತೋರಿಸುತ್ತಿದೆ. ಮಾತ್ರವಲ್ಲ ಅದನ್ನು ಸುಮಾರು 11,800 ಜನ ಲೈಕ್ ಕೂಡ ಮಾಡಿದ್ದಾರೆ. 4 ಸ್ಟಾರ್ ಕೂಡ ನೀಡಿದ್ದಾರೆ. ಯಾರೋ ಕಿಡಿಗೇಡಿಗಳು ಅಬ್ಬಿಫಾಲ್ಸ್ ಲೋಕೇಷನ್ ಅನ್ನು ಹೊಸ್ಕೇರಿ ಗ್ರಾಮದಲ್ಲಿ ನಮೂದಿಸಿರುವದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ.
ಗೂಗಲ್ ಮ್ಯಾಪ್ ಎಂಬ ಹೈಟೆಕ್ ತಂತ್ರಜ್ಞಾನವನ್ನು ನಂಬಿಕೊಂಡು ಬರುವ ಹೈಟೆಕ್ ಪ್ರವಾಸಿಗರು ಪ್ರಮಾದದ ಅರಿವಿಲ್ಲದೆ ಸುಮಾರು 40 ಕಿಲೋಮೀಟರ್ ಹೆಚ್ಚುವರಿ ಪ್ರಯಾಣ ಮಾಡುತ್ತಿದ್ದಾರೆ. ಜೊತೆಗೆ ಎರಡು ಗಂಟೆಗಳ ಅಮೂಲ್ಯ ಸಮಯವನ್ನೂ ಕಳೆದುಕೊಳ್ಳುತ್ತಿದ್ದಾರೆ. ಜಲಪಾತ ಅರಸಿ ವೀರಾಜಪೇಟೆ, ಮಡಿಕೇರಿ, ಕುಶಾಲನಗರ ಹೀಗೆ ಬೇರೆ ಬೇರೆ ದಿಕ್ಕುಗಳಿಂದ ಪ್ರತಿನಿತ್ಯ ನೂರಾರು ಪ್ರವಾಸಿಗಳು ಇಲ್ಲಿಗೆ ಆಗಮಿಸುತ್ತಿದ್ದು, ಕೊನೆಗೆ ನಾವು ತಪ್ಪಾದ ಸ್ಥಳಕ್ಕೆ ಬಂದಿದ್ದೇವೆ ಎಂದು ಅರಿವಾದಾಗ ಗೂಗಲ್ ಮ್ಯಾಪನ್ನು ಶಪಿಸುತ್ತಾ ಹಿಂದಿರುಗುತ್ತಿದ್ದಾರೆ. ಮಾತ್ರವಲ್ಲ ಹೆಚ್ಚುವರಿ ಪ್ರಯಾಣದಿಂದ ಬೇಸತ್ತು ಮೂಲ ಅಬ್ಬಿ ಜಲಪಾತವನ್ನೇ ನೋಡದೆ ಹಿಂದಿರುಗುತ್ತಿದ್ದಾರೆ.
- ಐಮಂಡ ಗೋಪಾಲ್ ಸೋಮಯ್ಯ, ಮರಗೋಡು