ಮಡಿಕೇರಿ, ಜ.29: ಕೊಡಗು ಜಿಲ್ಲಾ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಫೆ.3 ರಂದು ಕಣಿವೆ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ವಿಜಯಾ ವಿಷ್ಣುಭಟ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಅವರು, ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಹಲವಾರು ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗುತ್ತಿದ್ದು, ಅದರಂತೆ ಮಹಿಳೆಯರಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದರು.ಫೆ.3ರಂದು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಪೂರ್ವಾಹ್ನ 8.30ಕ್ಕೆ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ರಾಷ್ಟ್ರಧ್ವಜ ಹಾಗೂ ಕೂಡಿಗೆ ಗ್ರಾ. ಪಂ. ಅಧ್ಯಕ್ಷೆ ಪ್ರೇಮಲೀಲಾ ನಾಡಧ್ವಜ ಆರೋಹಣ ಮಾಡುವದರೊಂದಿಗೆ ಚಾಲನೆ ನೀಡಲಿದ್ದು, ಸಮ್ಮೇಳನದ ಅಂಗವಾಗಿ ನಿರ್ಮಿಸಲಾಗಿರುವ ದೇಶಕೋಡಿ ಕೂಸಕ್ಕ ದ್ವಾರವನ್ನು ಜಿ.ಪಂ. ಸದಸ್ಯೆ ಕೆ.ಆರ್. ಮಂಜುಳಾ, ಕೂತಂಡ ಪಾರ್ವತಿ ದ್ವಾರವನ್ನು ಜಿ.ಪಂ. ಸದಸ್ಯೆ ಸರೋಜಮ್ಮ ಅವರುಗಳು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

(ಮೊದಲ ಪುಟದಿಂದ) ಪೂರ್ವಾಹ್ನ 9.30ಕ್ಕೆ ಮಂಗಳವಾದ್ಯ, ಚಂಡೆವಾದ್ಯ, ಸ್ತ್ರೀಶಕ್ತಿ ಸಂಘಗಳ ಪೂರ್ಣಕುಂಭ, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಕಲಾ ತಂಡಗಳನ್ನೊಗೊಂಡ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹುಲುಸೆ ಸರಕಾರಿ ಶಾಲೆ ಬಳಿಯಿಂದ ಆರಂಭಗೊಂಡು ಕಣಿವೆ ರಾಮಲಿಂಗೇಶ್ವರ ದೇವಾಲಯದವರೆಗೆ ನಡೆಯಲಿದೆ. ಮೆರವಣಿಗೆಗೆ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕಿ ಸುಮನ್ ಡಿ.ಪನ್ನೇಕರ್ ಅವರು ಚಾಲನೆ ನೀಡಲಿದ್ದಾರೆ ಎಂದು ಲೋಕೇಶ್ ಸಾಗರ್ ಹೇಳಿದರು.

ರಂಗೋಲಿ ಸ್ಪರ್ಧೆ

ಬೆಳಗ್ಗೆ 10.30ರಿಂದ 11.30ರವರೆಗೆ ನಡೆಯಲಿರುವ ಜಾನಪದೋತ್ಸವಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ. ಹರೀಶ್ ಚಾಲನೆ ನೀಡಲಿದ್ದು, ಮಹಿಳೆಯರಿಗಾಗಿ ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆ ಅಂದು ಬೆಳಗ್ಗೆ 8ಗಂಟೆಯಿಂದ 9ಗಂಟೆಯವರೆಗೆ ನಡೆಯಲಿದೆ.

ಉದ್ಘಾಟನೆ: ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಮಾಜಿ ಸಚಿವೆ ಹಾಗೂ ಅಕ್ಕಮಹಾದೇವಿ ಅಧ್ಯಯನ ಪೀಠದ ಅಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್ ಪೂರ್ವಾಹ್ನ 11.30 ಗಂಟೆಗೆ ಉದ್ಘಾಟಿಸಲಿದ್ದು, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಆಶಯ ನುಡಿಯಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ವಸುಂದರ ಭೂಪತಿ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದು, ಶಾಸಕರುಗಳಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಭೋಜೇಗೌಡ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

ವಿಚಾರಗೋಷ್ಠಿ

ಮಧ್ಯಾಹ್ನ 1.30ರಿಂದ 2.30ರವರೆಗೆ ನಡೆಯಲಿರುವ ಭಾವಸಂಗಮ ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಉದ್ಘಾಟಿಸಲಿದ್ದು, ಜಿಲ್ಲೆಯ ಸುಮಾರು 12ಕ್ಕೂ ಅಧಿಕ ಮಹಿಳಾ ಗಾಯಕಿಯರು ಕನ್ನಡ ಗೀತೆಗಳನ್ನು ಹಾಡಲಿದ್ದಾರೆ.

ಅಪರಾಹ್ನ 2.30ರಿಂದ 3.30ರವರೆಗೆ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಕುಲ್ಲಚಂಡ ಎಸ್. ಪೂವಮ್ಮ ವಹಿಸಲಿದ್ದು, ಕಾವೇರಿ ಕಾಲೇಜಿನ ಪ್ರಾಧ್ಯಾಪಕಿ ರೇಖಾ ವಸಂತ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮಡಿಕೇರಿಯ ಮಮ್ತಾಜ್ ಅವರು ‘ಮಹಿಳೆ ಮತ್ತು ವೃತ್ತಿ ಕೌಶಲ್ಯ’, ಸೋಮವಾರಪೇಟೆಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ ಅವರು ‘ಮಹಿಳೆ ಮತ್ತು ಕೃಷಿ ಕುಟುಂಬಗಳು’, ಶಿಕ್ಷಕಿ ರಾಣಿ ರವೀಂದ್ರ ಅವರು ‘ಶೈಕ್ಷಣಿಕ ಕ್ಷೇತ್ರದಲ್ಲಿ ಕೊಡಗಿನ ಮಹಿಳೆಯರು’, ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಎಂ.ಕೆ.ಜಾನಕಿ ಮೋಹನ್ ಅವರು ‘ಮಹಿಳೆ ಮತ್ತು ಸಮಕಾಲೀನ ಸಮಸ್ಯೆಗಳು’ ಎಂಬ ವಿಷಯಗಳನ್ನು ಮಂಡನೆ ಮಾಡಲಿದ್ದಾರೆ.

ಕವಿಗೋಷ್ಠಿ

ಅಪರಾಹ್ನ 3.30ರಿಂದ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ಸ್ಮಿತಾ ಅಮೃತ್‍ರಾಜ್ ಅವರು ವಹಿಸಲಿದ್ದು, ಕರೋಟಿರ ಶಶಿ ಸುಬ್ರಮಣಿ ಅವರು ಉದ್ಘಾಟಿಸಲಿದ್ದಾರೆ. 22 ಮಂದಿ ಮಹಿಳಾ ಕವಿಗಳು ಕವನಗಳನ್ನು ವಾಚಿಸಲಿದ್ದಾರೆ.

ಸನ್ಮಾನ, ಸಮಾರೋಪ

ಸಂಜೆ 4.30ಕ್ಕೆ ನಡೆಯುವ ಸನ್ಮಾನ ಮತ್ತು ಸಮಾರೋಪ ಸಮಾಂಭದಲ್ಲಿ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಕ.ಸಾ.ಪ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿ.ವಿ.ಯ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 13ಮಂದಿ ಸಾಧಕಿಯರನ್ನು ಸನ್ಮಾನಿಸಲಾಗುತ್ತದೆ ಎಂದು ಲೋಕೇಶ್ ಸಾಗರ್ ಮಾಹಿತಿ ನೀಡಿದರು.

ಸನ್ಮಾನಿತರು

ಶ.ಗ.ನಯನತಾರ (ಮಾಧ್ಯಮ), ಬಿ.ಬಿ.ಸಾವಿತ್ರಿ (ಶಿಕ್ಷಣ), ಅಂಬೆಕಲ್ ಸುಶೀಲಾ (ರಂಗಗೀತೆ), ಸುಮಾ ಸುದೀಪ್ (ಸಮಾಜ ಸೇವೆ), ಬಿ.ಎಲ್.ಭಾಗ್ಯ (ಕ್ರೀಡೆ), ಮೇಘಾಭಟ್ ಹಾಗೂ ಸುವೇದಿತಾ (ಯುವ ಪ್ರತಿಭೆ), ಕೆ.ಕೆ.ಸುನೀತಾ (ಅನುವಾದ ಸಾಹಿತ್ಯ) ಮಿಲನ ಭರತ್ (ನೃತ್ಯ), ಲಕ್ಷ್ಮಿ (ಆಡಳಿತ), ಕೆ.ಎ.ಪದ್ಮಾವತಿ, ಬೇಬಿ ಚಿಣ್ಣಪ್ಪ, ಸುಲೋಚನಾ ಪ್ರಸನ್ನ (ವಿವಿಧ ಕ್ಷೇತ್ರಗಳು)

ಸಂಜೆ 5.30ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗಿನ ಉಪಾಹಾರದಿಂದ ಸಂಜೆವರೆಗಿನ ಊಟೋಪಚಾರದ ವ್ಯವಸ್ಥೆಯನ್ನು ಕಣಿವೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ಹಾಗೂ ಗ್ರಾಮಸ್ಥರು ನಡೆಸಿಕೊಡಲಿದ್ದಾರೆ ಎಂದು ಲೋಕೇಶ್ ಸಾಗರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ.ಸ.ಪಾ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಉಪಸ್ಥಿತರಿದ್ದರು.