ಶನಿವಾರಸಂತೆ, ಜ. 29: ಗೌಡಳ್ಳಿ ಗ್ರಾಮದ ಜಗದೀಶ್ ಅವರಿಗೆ ಸೇರಿದ ಗದ್ದೆಯ ಪಕ್ಕದ ತೋಡಿನಿಂದ ಅಕ್ರಮವಾಗಿ ಮರಳನ್ನು ದಾಸ್ತಾನು ಮಾಡಿದ್ದನ್ನು ವೃತ್ತ ನಿರೀಕ್ಷಕ ನಂಜುಂಡೇಗೌಡ ಮಾರ್ಗದರ್ಶನದಲ್ಲಿ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿ ಧಾಳಿ ಮಾಡಿ ಮರಳು ಸಹಿತ 1 ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡು, ಜಗದೀಶ್, ಪುತ್ರ ಸಿದ್ಧಲಿಂಗಯ್ಯ ಹಾಗೂ ಟ್ರ್ಯಾಕ್ಟರ್ ಚಾಲಕ ಪುಟ್ಟಯ್ಯ ಅವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳು ದೋಚುತ್ತಿದ್ದ ಸಂದರ್ಭ ಪೊಲೀಸರ ದಿಢೀರ್ ಧಾಳಿಗೆ ಬೆದರಿದ ದಂಧೆಕೋರರು, ಮರಳು ದೋಚುವ ಕಬ್ಬಿಣದ ತೆಪ್ಪವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ಸಿದ್ದಾಪುರ ಠಾಣಾವ್ಯಾಪ್ತಿಯ ಕೊಂಡಂಗೇರಿಯಲ್ಲಿ ನಡೆದಿದೆ.

ಸಿದ್ದಾಪುರ ಸಮೀಪದ ಕೊಂಡಂಗೇರಿಯಲ್ಲಿ ಹಾಡಹಗಲೇ ಕಾವೇರಿ ನದಿಯಿಂದ

(ಮೊದಲ ಪುಟದಿಂದ) ಅಕ್ರಮವಾಗಿ ಮರಳು ದೋಚುತ್ತಿರುವ ಕುರಿತು ಖಚಿತ ಸುಳಿವಿನ ಮೇರೆಗೆ, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ದಯಾನಂದ್ ನೇತೃತ್ವದ ತಂಡ ಧಾಳಿ ನಡೆಸಿದ ಪರಿಣಾಮ, ದಂಧೆಕೋರರು ಮರಳು ದೋಚಲು ಬಳಸುತ್ತಿದ್ದ ಕಬ್ಬಿಣದ ತೆಪ್ಪವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ತೆಪ್ಪ ಹಾಗೂ ದೋಚಿದ್ದ ಮರಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.