ಕುಶಾಲನಗರ, ಜ. 28: ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನ ಹಾಗೂ ಮಾನವ ಸರಪಳಿ ಕಾರ್ಯಕ್ರಮ ಕುಶಾಲನಗರದಲ್ಲಿ ನಡೆಯಿತು.
ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮದ ಅಂಗವಾಗಿ ಸಮಿತಿಯ ನೂರಾರು ಕಾರ್ಯಕರ್ತರು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಶಾಂತಿ, ಸೌರ್ಹಾದತೆಯ ಸಮಾಜ ನಿರ್ಮಾಣದ ಬಗ್ಗೆ ಘೋಷಣೆಗಳನ್ನು ಕೂಗಿದರು.
ನಂತರ ಕಾರು ನಿಲ್ದಾಣದ ಬಹಿರಂಗ ವೇದಿಕೆಯಲ್ಲಿ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ಕೊಡಗು ಜಿಲ್ಲಾ ಎಸ್‍ಕೆಎಸ್‍ಎಸ್‍ಎಫ್ ಅಧ್ಯಕ್ಷ ನೌಶಾದ್ ಫೈಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಡಗು ಜಿಲ್ಲಾ ನಾಯಿಬ್ ಖಾಝಿಯ ಅಬ್ದುಲ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಸರ್ವಧರ್ಮ ಗಳು ಕೂಡ ಸಮಾನತೆಯನ್ನು ಪ್ರತಿಪಾದಿಸಿವೆ. ಎಲ್ಲಾ ಧರ್ಮಗ್ರಂಥಗಳ ತಿರುಳು ಕೂಡ ಒಂದೇ ಎಂಬ ಸತ್ಯ ಅರಿಯಬೇಕಿದೆ. ಪ್ರತಿಯೊಬ್ಬರೂ ದ್ವೇಷ, ಅಸೂಯೆ, ಮೇಲು ಕೀಳು ಭಾವನೆ ತೊರೆದು ಪ್ರೀತಿ, ವಿಶ್ವಾಸ ಸೌರ್ಹಾದತೆ, ಸಾಮರಸ್ಯದ ಮೂಲಕ ಸುಭದ್ರ ಸಮಾಜ ನಿರ್ಮಾಣಕ್ಕೆ ಚಿಂತನೆ ಹರಿಸಬೇಕಿದೆ.
ಜಾತಿ, ಮತ, ಧರ್ಮಗಳನ್ನು ಮೀರಿದ ಮಾನವೀಯತೆ ಎಲ್ಲರ ಧರ್ಮವಾಗಬೇಕಿದೆ ಎಂದರು.
ಮಂಗಳೂರಿನ ರಿಯಾಜ್ ರಹ್ಮಾನಿ, ಸೋಮವಾರಪೇಟೆ ಸಂತ ಜೋಸೆಫ್ ವಿದ್ಯಾಸಂಸ್ಥೆ ಪ್ರಾಂಶುಪಾಲ ರಾದ ಫಾದರ್ ಟೆನ್ನಿ ಕುರಿಯನ್ ಮುಖ್ಯ ಭಾಷಣ ಮಾಡಿದರು.
ಎಸ್‍ಕೆಎಸ್‍ಎಸ್‍ಎಫ್‍ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಿಸ್ಬಾಹಿ, ಸುಂಟಿಕೊಪ್ಪದ ಕೆ.ಎಂ.ಇಬ್ರಾಹಿಂ ಮಾಸ್ಟರ್ ಮತ್ತಿತರ ಪ್ರಮುಖರು ಇದ್ದರು.