ಮಡಿಕೇರಿ, ಜ. 29: ಗ್ರಾಮಾಂತರ ಠಾಣಾ ವತಿಯಿಂದ ಮೂರ್ನಾಡಿನಲ್ಲಿ ಜನಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಅವರು ಮಾತನಾಡಿ, ಸಾರ್ವಜನಿಕರು ಮಾದಕ ವಸ್ತು ಮಾರಾಟ ಹಾಗೂ ಯಾವದೇ ರೀತಿಯ ಅಕ್ರಮಗಳ ಬಗ್ಗೆ ಮಾಹಿತಿಯನ್ನು ಮುಕ್ತವಾಗಿ ನೀಡುವಂತೆ ಹಾಗೂ ಕೆಎಸ್‍ಪಿ ಎಂಬ ಆ್ಯಪ್ ಬಳಸಿ ದೂರು ನೀಡುವಂತೆ ಮನವಿ ಮಾಡಿದರು.

ಜನಸಂಪರ್ಕ ಸಭೆಯಲ್ಲಿ ಹಾಜರಿದ್ದ ಮಡಿಕೇರಿ ಡಿವೈಎಸ್‍ಪಿ ಸುಂದರ್‍ರಾಜ್ ಮಾತನಾಡಿ, ಯಾವದೇ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ, ಸಾರ್ವಜನಿಕರು ಮುಕ್ತವಾಗಿ ಮಾಹಿತಿ ನೀಡಿ ಪೊಲೀಸ್ ಬಾತ್ಮಿದಾರರಾಗು ವಂತೆ ತಿಳಿಸಿದರು.

ಸಭೆಯಲ್ಲಿ ಸುಮಾರು 200ಕ್ಕೂ ಅಧಿಕ ಸಾರ್ವಜನಿಕರು ಇದ್ದರು. ಸಭೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ನಂಜುಂಡಸ್ವಾಮಿ, ಮೂರ್ನಾಡು ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಪೂವಪ್ಪ, ತಾಲೂಕು ಪಂಚಾಯತ್ ಅಧ್ಯಕ್ಷೆ ಶೋಭಾ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಹಾಗೂ ಮೂರ್ನಾಡು ಉಪಠಾಣಾ ಸಿಬ್ಬಂದಿಗಳು ಮತ್ತು ಮಡಿಕೇರಿ ಗ್ರಾಮಾಂತರ ಠಾಣಾ ಸಿಬ್ಬಂದಿಗಳು ಭಾಗವಹಿಸಿದ್ದರು. ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಸ್ವಾಗತಿಸಿ, ಸರ್ಕಲ್ ಇನ್ಸ್‍ಪೆಕ್ಟರ್ ಸಿದ್ದಯ್ಯ ವಂದಿಸಿದರು.