ಮಡಿಕೇರಿ, ಜ. 29: ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರ ನೆರವಿಗೆ ವಿಳಂಬರಹಿತವಾಗಿ ಸರ್ಕಾರ ಮುಂದಾಗಲೇ ಬೇಕು. ಇನ್ನೂ ಓರ್ವ ಸಂತ್ರಸ್ತ ನೊಂದು ಸಾವಿಗೆ ಶರಣಾದದ್ದೇ ಆದಲ್ಲಿ ಮುಖ್ಯಮಂತ್ರಿ ಗಳು ಭಾರೀ ಪ್ರತಿಭಟನೆಯನ್ನು ಕೊಡಗಿನಲ್ಲಿ ಎದುರಿಸಬೇಕಾದೀತು ಎಂದು ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಅಧ್ಯಕ್ಷ, ಚಿಂತಕ ಚಕ್ರವರ್ತಿ ಚಂದ್ರಚೂಡ್ ಎಚ್ಚರಿಸಿದ್ದಾರೆ.

ನಗರದ ಲೀ ಕೂರ್ಗ್ ಹೊಟೇಲ್ ಸಭಾಂಗಣದಲ್ಲಿ ಆಯೋಜಿತ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ 30 ವಿದ್ಯಾರ್ಥಿಗಳಿಗೆ 1 ವರ್ಷದ ಶೈಕ್ಷಣಿಕ ನೆರವಾಗಿ ತಲಾ 10 ಸಾವಿರ ರೂ.ಗಳಂತೆ 3 ಲಕ್ಷ ರೂ.ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೊಡಗಿನ ಪಶ್ಚಿಮಘಟ್ಟಶ್ರೇಣಿಯಿಲ್ಲದೇ ಹೋದರೆ ಜಗತ್ತಿಗೇ ಅಪಾಯವಿರುವ ಹಿನ್ನೆಲೆಯಲ್ಲಿ ದುರಂತಕ್ಕೊಳಗಾದ ಕೊಡಗಿನ ನೆರವಿಗೆ ಜಗತ್ತೇ ನಿಲ್ಲಬೇಕಾಗಿದೆ ಎಂದರು.

ಸರ್ಕಾರಕ್ಕೆ ಪ್ರಕೃತಿ ವಿಕೋಪ ಸಂಭವಿಸಿದ ಕೆಲವು ದಿನಗಳಲ್ಲಿ ಇದ್ದ ಉತ್ಸಾಹ ಈಗ ಕಂಡುಬರುತ್ತಿಲ್ಲ. ಕೊಡಗು ನವನಿರ್ಮಾಣದ ಕಾರ್ಯ ಕೆಲವು ತಿಂಗಳ ಕೆಲಸವಲ್ಲ. ಅದು 5-10 ವರ್ಷಗಳಾದರೂ ಮುಗಿಯದ ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದ ಅವರು, ಸಂತ್ರಸ್ತರಿಗೆ ಕಟ್ಟಡ ನಿರ್ಮಿಸುವದಕ್ಕಿಂತ ಮೊದಲು ಅವರಲ್ಲಿ ಆತ್ಮಸ್ಥೆರ್ಯ ತುಂಬಿ ಮನಸ್ಸು ಕಟ್ಟುವ ಕೆಲಸ ಮೊದಲಾಗಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರು.

ಕನ್ನಡ ಸಿನಿರಂಗದ ಮಹತ್ವಾ ಕಾಂಕ್ಷೆಯ ಕುರುಕ್ಷೇತ್ರ ಚಿತ್ರದ ಪ್ರೀಮಿಯರ್ ಶೋ ಪ್ರದರ್ಶನದಲ್ಲಿ ಬಂದ ಹಣವನ್ನು ಕೊಡಗಿನ ಸಂತ್ರಸ್ತರಿಗೆ ನೀಡುವದಾಗಿ ಚಿತ್ರ ನಿರ್ಮಾಪಕ ಶಾಸಕ ಮುನಿರತ್ನ ಭರವಸೆ ನೀಡಿದ್ದಾರೆ ಎಂದು ಪ್ರಕಟಿಸಿದ ಚಂದ್ರಚೂಡ್, ವಿಷ್ಣು ವರ್ಧನ್ ಸೇನಾ ಸಮಿತಿಯಿಂದಲೂ 1 ಮನೆಯನ್ನು ಸಂತ್ರಸ್ತ ಕುಟುಂಬಕ್ಕೆ ನಿರ್ಮಿಸುವ ಆಶ್ವಾಸನೆ ದೊರಕಿದೆ ಎಂದು ಹೇಳಿದರು.

ಪತ್ರಕರ್ತರಿಗೆ ಶ್ಲಾಘನೆ!

ಪ್ರಕೃತಿ ದುರಂತದ ಸಂದರ್ಭ ಜೀವದ ಹಂಗು ತೊರೆದು ಸುದ್ದಿಯೊಂದಿಗೆ ಅನೇಕ ಪ್ರಾಣಗಳನ್ನು ರಕ್ಷಿಸಿ, ಇಡೀ ಜಗತ್ತಿಗೇ ಕೊಡಗಿನ ದುರಂತದ ಮಾಹಿತಿ ನೀಡಿದ ಮಾಧ್ಯಮ ಪ್ರತಿನಿಧಿಗಳು, ಪತ್ರಕರ್ತ ರನ್ನು ಯಾರೂ ಪ್ರಶಂಸೆ ಮಾಡುತ್ತಿಲ್ಲ. ಪತ್ರಕರ್ತರ ಕಾರ್ಯ ಖಂಡಿತಾ ಅದ್ಭುತವಾಗಿತ್ತು ಎಂದೂ ಚಕ್ರವರ್ತಿ ಚಂದ್ರಚೂಡ್ ಶ್ಲಾಘಿಸಿದರು.

ಹೊಟೇಲ್ ಅಸೋಸಿಯೇಷನ್ ನೆರವು

ಕೊಡಗು ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಮಾತನಾಡಿ, ಪ್ರವಾಸೋದ್ಯಮ ಅವಲಂಭಿತ ಜಿಲ್ಲೆಯಾದ ಕೊಡಗು ಪಾಕೃತಿಕ ದುರಂತದಿಂದ ಸಮಸ್ಯೆ ಎದುರಿಸಿತ್ತು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೇ 40 ಸಾವಿರ ಉದ್ಯೋಗಿ ಗಳು, 1 ಲಕ್ಷ ಜನ ಅವಲಂಭಿತರಿದ್ದು ಎಲ್ಲರಿಗೂ ಆರ್ಥಿಕ ಹೊಡೆತವಾಗಿತ್ತು. ಹೊಟೇಲ್ ಅಸೋಸಿಯೇಷನ್ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಕೊಡಗು ಸುರಕ್ಷಿತ ಎಂಬ 4 ಕಿರುಚಿತ್ರಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಸಾರ ಮಾಡಿದ ಪರಿಣಾಮ ಪ್ರವಾಸೋದ್ಯಮ ಶೇ.20 ರಷ್ಟು ಚೇತರಿಕೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ, ಪ್ರವಾಸೋದ್ಯಮ ಸಚಿವರೂ ಆದ ಸಾ.ರಾ.ಮಹೇಶ್ ಕೊಡಗಿನ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಬಹಳಷ್ಟು ನೆರವು ನೀಡಿದ್ದಾರೆ ಎಂದು ಪ್ರಶಂಶಿಸಿದರು. ದುರಂತದಿಂದ ನಲುಗಿದ ಕೊಡಗಿನ ಸಂತ್ರಸ್ತರಿಗಾಗಿ ಹೊಟೇಲ್ ಅಸೋಸಿಯೇಷನ್ ಕೂಡ ಅನೇಕ ರೀತಿಯಲ್ಲಿ ನೆರವಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಟೂರ್ ಅಂಡ್ ಟ್ರಾವಲ್ಸ್ ಅಸೋಸಿಯೇಶನ್ ಅಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ, ಪ್ರವಾಸಿಗರಿಂದಾಗಿಯೇ ಕೊಡಗಿನ ಆರ್ಥಿಕತೆ ಸುಧಾರಿಸಿದೆ ಎಂಬದನ್ನು ಪ್ರವಾಸಿಗರಿಂದ ಕೊಡಗು ಹಾಳಾಗುತ್ತಿದೆ ಎಂದು ದೂರುವವರು ಅರ್ಥೈಸಿಕೊಳ್ಳಬೇಕು ಎಂದರು. ಲೀ ಕೂರ್ಗ್ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಬಿ.ಬಷೀರ್ ಮಾತನಾಡಿ, ಸಂತ್ರಸ್ತರಿಗೆ ನೆರವಾಗು ತ್ತಿರುವ ಸಂಘಸಂಸ್ಥೆಗಳಿಗೆ ಕೊಡಗಿನ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದರು.

ಪೀಪಲ್ ಫಾರ್ ಪೀಪಲ್ ಸಂಸ್ಥೆಯ ಗೌರವ ಕಾರ್ಯದರ್ಶಿ ಸಂತೋಷ್ ಕೊಡಂಕೇರಿ ಮಾತನಾಡಿ, ಪ್ರಕೃತಿ ವಿಕೋಪ ಪೀಡಿತ ಕೊಡಗಿನ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಂಗಸಪ್ತಾಹ, ಸಂಗೀತ ಕಾರ್ಯಕ್ರಮದ ಮೂಲಕ ಸಂಗ್ರಹಗೊಂಡ ಹಣವನ್ನು ಈ ಮೂಲಕ ಸಂತ್ರಸ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಂಸ್ಥೆಯಿಂದ ನೆರವು ಮುಂದುವರೆಯಲಿದೆ ಎಂದರು.

ಪೀಪಲ್ ಫಾರ್ ಪೀಪಲ್ ಸಂಸ್ಥೆಯಿಂದ ಸಂತ್ರಸ್ತರಿಗಾಗಿ ತಲಾ 1 ರೂ. ಸಂಗ್ರಹ ಅಭಿಯಾನದಂಥ ವಿನೂತನ ಯೋಜನೆ ಜಾರಿಗೊಳಿಸಿ 1 ರೂ. ಸಂಗ್ರಹಿಸುತ್ತಲೇ 60 ಸಾವಿರ ರೂ. ಮೊತ್ತ ಕ್ರೊಡೀಕರಿಸಿರುವದಾಗಿ ಸಂಸ್ಥೆಯ ಸದಸ್ಯ ವಿಶಾಲ್ ಭಾರಧ್ವ್ವಾಜ್ ತಿಳಿಸಿದರು.

ಇದೇ ಸಂದರ್ಭ ಕೊಡಗಿನ ಪ್ರಾಕೃತಿಕ ದುರಂತದ ಕಥೆ ಹೇಳುವ ವಿಭಿನ್ನ ಸಾಕ್ಷ್ಯಚಿತ್ರ ಜಮ್ಮಾಭೂಮಿರ ಕಥೆಗೆ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಪ್ರಾಕೃತಿಕ ದುರಂತದ ನಂತರ ಪರಿಹಾರ ಕಾರ್ಯಗಳಲ್ಲಿ ಆದದ್ದೇನು ಎಂದು ಹೇಳಿಕೆ ನೀಡುವ ಮೂಲಕ ಚಾಲನೆ ನೀಡಿದರು. ಸಂತ್ರಸ್ತರ ಕುಟುಂಬಸ್ಥರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.