ಶ್ರೀಮಂಗಲ, ಜ. 29 : ದಕ್ಷಿಣ ಕೊಡಗಿನ ಮೂಲಕ ಮೈಸೂರು ಹಾಗೂ ಬೆಂಗಳೂರು ಕಡೆಗೆ ಸಂಪರ್ಕ ಕಲ್ಪಿಸುವ ತಿತಿಮತಿ ಆನೆಚೌಕೂರು ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಸಮಯದಲ್ಲಿ ವಾಹನ ಸಂಚಾರ ನಿರ್ಬಂಧಿಸುವ ಯಾವದೇ ಪ್ರಸ್ತಾವನೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿರೋಧಿಸುವದಾಗಿ ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ.

ವೇದಿಕೆಯ ಅಧ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಯಾವದೇ ಕಾರಣಕ್ಕೂ ಈ ಮಾರ್ಗವನ್ನು ನಿರ್ಬಂಧಿಸ ಬಾರದು; ಇದರಿಂದ ಜನರಿಗೆ ತುಂಬಾ ತೊಂದರೆಯಾಗಲಿದೆ. ಇತ್ತೀಚೆಗೆ ಬಸ್ಸೊಂದು ಡಿಕ್ಕಿಯಾಗಿ ಸಾಕಾನೆ ಸಾವಿಗೀಡಾಗಿರುವ ಪ್ರಕರಣವನ್ನು ಮುಂದಿಟ್ಟುಕೊಂಡು ರಾತ್ರಿ ವೇಳೆ ಈ ರಸ್ತೆ ಸಂಚಾರ ನಿರ್ಬಂಧಿಸುವದು ಜನವಿರೋಧಿ ಕ್ರಮವಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಾದರೆ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಯಿತು.

ರಾಜ್ಯದಲ್ಲಿ ಖಾಸಗಿ ವನ್ಯಧಾಮ ಗಳನ್ನು ಸ್ಥಾಪಿಸುವ ಕುರಿತಂತೆ ಸರ್ಕಾರದ ಪ್ರಸ್ತಾವನೆಯಲ್ಲಿದ್ದು ಈ ಬಗ್ಗೆ ಖಾಸಗಿ ಜಾಗದ ಮಾಲೀಕರು ಸ್ವಯಂಪ್ರೇರಿತರಾಗಿ ತಮ್ಮ ಸ್ವಂತ ಜಾಗವನ್ನು ಖಾಸಗಿ ವನ್ಯಧಾಮವನ್ನಾಗಿ ಮಾಡುವ ಪ್ರಸ್ತಾವನೆಗೆ ಈಗಾಗಲೇ ಕೊಡಗು ವನ್ಯಜೀವಿ ಸಂಘದ ಅಧ್ಯಕ್ಷರಾಗಿದ್ದ ಕರ್ನಲ್ ಸಿ.ಪಿ. ಮುತ್ತಣ್ಣ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಜನಾಭಿಪ್ರಾಯ ಸಂಗ್ರಹಿಸಲು ಜನರಿಗೆ ವಾಸ್ತವಾಂಶವನ್ನು ಮರೆಮಾಚಿ ಕೆಲವು ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಕೊಡಗಿನಲ್ಲಿ ಇಂತಹ ಹಲವು ಖಾಸಗಿ ವನ್ಯಧಾಮಗಳಾದರೆ ಈಗಾಗಲೇ ಇರುವ ಮಾನವ ವನ್ಯ ಜೀವಿ ಸಂಘರ್ಷ ಮತ್ತಷ್ಟು ಹೆಚ್ಚಾಗಲಿದೆ. ಆದ್ದರಿಂದ ಜನರನ್ನು ಕತ್ತಲೆಯಲ್ಲಿಟ್ಟು ಇಂತಹ ಯಾವದೇ ಪ್ರಸ್ತಾವನೆಯನ್ನು ಯೋಜನೆಯಾಗಿ ಜಾರಿಗೊಳಿಸಬಾರದು ಎಂದು ವೇದಿಕೆಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೊಡಗು ಜಿಲ್ಲೆಯಲ್ಲಿ ಅರಣ್ಯ ಮತ್ತು ಗ್ರಾಮಗಳ ನಡುವೆ 282 ಕಿ.ಮೀ. ವ್ಯಾಪ್ತಿಯ ಅರಣ್ಯ ಸರಹದ್ದು ಇದ್ದು, ಮಾನವ ಕಾಡಾನೆ ಸಂಘರ್ಷಕ್ಕೆ ಪರಿಹಾರವಾಗಿ ಈ ಸರಹದ್ದು ವ್ಯಾಪ್ತಿಯಲ್ಲಿ ರೈಲ್ವೆ ಸ್ಲೀಪರ್ ಬ್ಯಾರಿಕೇಡ್ ಗಳನ್ನು ನಿರ್ಮಿಸಲು ವೇದಿಕೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಅಂದಾಜು 30 ಕಿ.ಮೀ. ಬ್ಯಾರಿಕೇಡ್ ಕಾಮಗಾರಿ ಆಗಿದ್ದು ಹಂತ ಹಂತವಾಗಿ ಕಾಮಗಾರಿಯನ್ನು ನಡೆಸುವ ಭರವಸೆಯನ್ನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ನೀಡಿದ್ದಾರೆ. ಹೆಚ್ಚು ಕಾಡಾನೆಗಳ ಉಪಟಳ ಇರುವ ವ್ಯಾಪ್ತಿಗೆ ಆದ್ಯತೆ ಮೇಲೆ ಬ್ಯಾರಿಕೇಡ್ ನಿರ್ಮಿಸಲು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.

ಸಭೆಯಲ್ಲಿ ಕರ್ನಲ್ ಸಿ.ಪಿ. ಮುತ್ತಣ್ಣ, ಕಾವೇರಿ ಸೇನೆಯ ಸಂಚಾಲಕ ರವಿಚಂಗಪ್ಪ, ಚೆಪ್ಪುಡಿರ ಶೆರಿಸುಬ್ಬಯ್ಯ, ಜಮ್ಮಡ ಗಣೇಶ್‍ಅಯ್ಯಣ್ಣ, ರಾಯ್‍ಬೋಪಣ್ಣ, ಶಾನ್‍ಬೋಪಯ್ಯ ಹಾಜರಿದ್ದರು.