ಪೊನ್ನಂಪೇಟೆ, ಜ. 29: ಕೊಡಗಿನ ಸಾಮಾನ್ಯ ಬೆಳೆಗಾರರ, ಕೃಷಿಕರ ಮತ್ತು ಕೃಷಿ ಕಾರ್ಮಿಕರ ಬದುಕಿಗೆ ನಿರಂತರವಾಗಿ ಸವಾಲೊಡ್ಡುತ್ತಿರುವ ಕೊಡಗಿನ ಕೆಲವೇ ಕೆಲವು ಡೋಂಗಿ ಪರಿಸರವಾದಿಗಳಿಂದ ಜಿಲ್ಲೆಯ ಅಸ್ತಿತ್ವಕ್ಕೆ ತೀವ್ರ ಧಕ್ಕೆ ಎದುರಾಗುತ್ತಿದೆ. ವಿದೇಶಿ ದೇಣಿಗೆ ಹಣದ ಆಸೆಯಿಂದಾಗಿ ಕೊಡಗನ್ನು ಇವರು ತಮ್ಮ ಪ್ರಯೋಗ ಶಾಲೆಯನ್ನಾಗಿಸುತ್ತಿದ್ದಾರೆ. ಡೋಂಗಿ ಪರಿಸರವಾದಿಗಳಿಂದ ಕೊಡಗನ್ನು ಮುಕ್ತಿಗೊಳಿಸದಿದ್ದರೆ ಮುಂದೆ ಕೊಡಗಿಗೆ ಗಂಡಾಂತರ ತಪ್ಪಿದ್ದಲ್ಲ ಎಂದು ಸೇವ್ ಕೊಡಗು ಆಂದೋಲನ ಹೋರಾಟ ಸಮಿತಿ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸೇವ್ ಕೊಡಗು ಆಂದೋಲನದ ಭಾಗವಾಗಿ ರಚಿಸಲಾಗಿರುವ ವಿವಿಧ ರಾಜಕೀಯ ಪಕ್ಷಗಳ ಮತ್ತು ವಿವಿಧ ಸಂಘಟನೆಗಳ ಒಕ್ಕೂಟದ ಪರವಾಗಿ ಮಾತನಾಡಿದ ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಸಮಿತಿ ಅಧ್ಯಕ್ಷ ಕುಂಙಂಗಡ ಅರುಣ್ ಭೀಮಯ್ಯ ಅವರು, ಇದೀಗ ಜಿಲ್ಲಾದ್ಯಂತ ಡೋಂಗಿಗಳ ನಿಜವಾದ ಬಣ್ಣ ಬಯಲಾಗುತ್ತಿದೆ. ಅಲ್ಲದೆ ಎಲ್ಲೆಡೆ ಇವರ ವಿರುದ್ಧ ಜನಾಕ್ರೋಶ ವ್ಯಕ್ತಗೊಳ್ಳುತ್ತಿದೆ. ಆದ್ದರಿಂದ ಡೋಂಗಿ ಪರಿಸರವಾದಿಗಳು ಕೊಡಗಿನ ಬಹುಜನರ ಭಾವನೆಗಳಿಗೆ ಬೆಲೆ ನೀಡಿ ತಮ್ಮ ತಪ್ಪನ್ನು ತಿದ್ದಿಕೊಳ್ಳುವದು ಒಳ್ಳೆಯದು. ಇಲ್ಲದಿದ್ದರೆ ಜನರೇ ಜಾಗೃತರಾಗಿ ಇವರಿಗೆ ಪಾಠ ಕಲಿಸುವ ಕಾಲ ಬಹಳ ದೂರವೇನಿಲ್ಲ ಎಂದು ಕಿಡಿ ಕಾರಿದ್ದಾರೆ.
ಕೊಡಗಿನ ಮೂಲಕ ಹಾದು ಹೋಗಲಿರುವ ಉದ್ದೇಶಿತ ಚತುಷ್ಪತ ರಸ್ತೆಯ ಅಗಲ 200 ಅಡಿಗಳಷ್ಟು ಇರುತ್ತದೆ ಎಂಬ ಸುಳ್ಳÀನ್ನು ಇದೇ ಡೋಂಗಿಗಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಸ್ತೂರಿ ರಂಗನ್ ವರದಿ ವಿರೋಧ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ತೀತಿತ ಧರ್ಮಜ ಉತ್ತಪ್ಪ ಅವರು ಮಾತನಾಡಿ, ಕೆಲ ಡೋಂಗಿ ಪರಿಸರವಾದಿಗಳ ಅಭಿಪ್ರಾಯವೇ ಕೊಡಗಿನ ಬಹುಜನರ ಅಭಿಪ್ರಾಯವಾಗುವದಿಲ್ಲ. ಇದೀಗ ಹಣಸೂರು-ತಿತಿಮತಿ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸುವಂತೆ ಕೋರಿ ಬೆಂಗಳೂರು ಮೂಲದ ವ್ಯಕ್ತಿಗಳಿಬ್ಬರ ಮೂಲಕ ಡೋಂಗಿ ಪರಿಸರವಾದಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇದೆಲ್ಲವೂ ಇವರ ಷಡ್ಯಂತರದ ಭಾಗವಾಗಿದ್ದು, ಭವಿಷ್ಯದಲ್ಲಿ ಕೊಡಗು ಜಿಲ್ಲೆ ‘ಜನವಾಸಕ್ಕೆ ಯೋಗ್ಯವಲ್ಲ’ಎಂಬ ವಾದವನ್ನು ಇವರು ಮುಂದಿಟ್ಟರೂ ಅಚ್ಚರಿಯೇನಿಲ್ಲ. ಅಲ್ಲದೆ ಮುಂದೆ ವೀರಾಜಪೇಟೆ-ಮಾಕುಟ್ಟ ಮತ್ತು ಸಿದ್ದಾಪುರ- ಮಾಲ್ದಾರೆ- ಪಿರಿಯಾಪಟ್ಟಣ ರಸ್ತೆಯಲ್ಲಿಯೂ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಬೇಕೆಂಬ ಬೇಡಿಕೆ ಸಲ್ಲಿಸುವ ಎಲ್ಲ ಸಾಧ್ಯತೆಗಳಿದೆ. ಆದ್ದರಿಂದ ಕೊಡಗಿನ ಜನ ಕೂಡಲೇ ಜಾಗೃತರಾಗಿ ಡೋಂಗಿ ಪರಿಸರವಾದಿಗಳ ಜನವಿರೋಧಿ ಕೆಲಸಗಳ ವಿರುದ್ಧ ಪ್ರತಿಭಟಿಸಬೇಕು. ಜನ ಎಚ್ಚೆತ್ತುಕೊಂಡು ಸಾಮೂಹಿಕವಾಗಿ ಇವರ ಧೋರಣೆ ಯನ್ನು ಖಂಡಿಸುವಂತಾಗಬೇಕು. ಇದಕ್ಕಾಗಿ ಜಿಲ್ಲೆಯ ಬಹುಜನರು ಒಗ್ಗಟ್ಟಾಗಬೇಕಿದೆ ಎಂದು ಕರೆ ನೀಡಿದರು.
ಕಸ್ತೂರಿರಂಗನ್ ವರದಿಯನ್ನು ಕೊಡಗಿನ ಜನರ ಮೇಲೆ ಹೇರುವಲ್ಲಿಯೂ ಡೋಂಗಿ ಪರಿಸರವಾದಿಗಳ ನೇರಾ ಕೈವಾಡವಿದೆ. ಹಲವು ವೈಜ್ಞಾನಿಕ ಸತ್ಯಗಳನ್ನು ಮರೆಮಾಚಿ ಕೇಂದ್ರಕ್ಕೆ ತಪ್ಪು ಮಾಹಿತಿ ನೀಡಿರುವ ಪಲವಾಗಿಯೇ ಕೊಡಗಿನ ಜನವಸತಿ ಪ್ರದೇಶಗಳು ಕಸ್ತೂರಿರಂಗನ್ ವರದಿಯ ವ್ಯಾಪ್ತಿಯಲ್ಲಿದೆ. ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸುವದರಲ್ಲಿ ಯಾವದೇ ವಿರೋಧವಿಲ್ಲ. ಆದರೆ ವರದಿಯಲ್ಲಿ ಉಲ್ಲೇಖಿಸಿರುವ ಕೊಡಗಿನ 55 ಕಂದಾಯ ಗ್ರಾಮ ಮತ್ತು ಜನವಸತಿ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಅರಣ್ಯ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಿ ಎಂದು ಧರ್ಮಜ ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಮಿತಿ ಮೀರಿರುವ ಡೋಂಗಿ ಪರಿಸರವಾದಿಗಳ ಉಪಟಳದ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಅವರ ಜನವಿರೋಧಿ ಕೃತ್ಯಗಳನ್ನು ಒಕ್ಕೋರಲಿನಿಂದ ಖಂಡಿಸಲು ಇದೇ ತಿಂಗಳ 18ರಂದು ಸೋಮವಾರ ಗೋಣಿಕೊಪ್ಪಲು ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಪಾಲಿಬೆಟ್ಟ ಜಂಕ್ಷನ್‍ನಿಂದ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ಸಭೆಯಲ್ಲಿ ಹಿರಿಯ ಹೋರಾಟಗಾರರು, ಶಾಸಕರು, ಜಿ.ಪಂ., ತಾ.ಪಂ, ವಿವಿಧ ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಬೆಳೆಗಾರರು, ಕೃಷಿಕ ಮತ್ತು ಕೃಷಿ ಕಾರ್ಮಿಕರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರಲ್ಲದೆ, ಪೆ.18ರ ಬೃಹತ್ ಪ್ರತಿಭಟನಾ ಸಭೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ವಿರಾಜಪೇಟೆ ತಾಲೂಕಿನ ಎಲ್ಲಾ 39 ಗ್ರಾ.ಪಂ. ವ್ಯಾಪ್ತಿಯಲ್ಲಿ ಸೇವ್ ಕೊಡಗು ಆಂದೋಲನದ ಭಾಗವಾಗಿ ರಚಿಸಲಾಗಿರುವ ವಿವಿಧ ರಾಜಕೀಯ ಪಕ್ಷಗಳ ಮತ್ತು ವಿವಿಧ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮತ್ತು ಶಾಸಕರು 4 ದಿನಗಳ ಕಾಲ ಪ್ರವಾಸ ನಡೆಸಿ ಜನರನ್ನು ಸಂಘಟಿಸಲು ರೂಪು ರೇಷೆ ಸಿದ್ಧಗೊಂಡಿದೆ. ಅಲ್ಲದೆ ಬೆಂಬಲ ಸೂಚಕವಾಗಿ ಅಂದು ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಗೋಣಿಕೊಪ್ಪಲು ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಭೆಯಲ್ಲಿ ಪಾಲ್ಗೊಳ್ಳುವಂತೆ ಸ್ಥಳಿಯ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಅಧ್ಯಕ್ಷರಲ್ಲಿ ಸಮಿತಿ ಪರವಾಗಿ ಮನವಿ ಮಾಡಲಾಗುವದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಬಿಟ್ಟಂಗಾಲ ಕೊಡವ ಕ್ಲಬ್‍ನ ಕ್ರೀಡಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ ಅವರು ಹಾಜರಿದ್ದರು.