ಮಡಿಕೇರಿ, ಜ. 29: ಕಾಫಿ ಮಂಡಳಿಯು ಮಳೆಗಾಲದ ಬಳಿಕ ನಡೆಸಿದ ಕಾಫಿ ಉತ್ಪಾದನಾ ಸಮೀಕ್ಷೆಯಲ್ಲಿ ಕಾಫಿ ಹೂ ಸಮೀಕ್ಷಾ ಉತ್ಪಾದನಾ ಪ್ರಮಾಣಕ್ಕಿಂತ ಪ್ರಮಾಣ ಕ್ಷೀಣಗೊಂಡಿದೆ.2018-19 ರ ಕಾಫಿ ಹೂ ಸಮಿಕ್ಷೆಯಲ್ಲಿ 3,80,000 ಮೆ. ಟನ್ ದೇಶದ ಕಾಫಿ ಉತ್ಪಾದನೆ ಎಂದು ಅಂದಾಜಿಸಲಾಗಿದ್ದು ಮಳೆಗಾಲದ ಬಳಿಕದ ಸಮೀಕ್ಷೆಯಲ್ಲಿ ಇದರ ಪ್ರಮಾಣ 3,19,500 ಮೆ. ಟನ್‍ಗೆ ಇಳಿದಿದೆ. ಇದಕ್ಕೆ ಮುಖ್ಯ ಕಾರಣ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸುರಿದ ಭಾರೀ ಮಳೆ, ಪ್ರವಾಹ, ಭೂ ಕುಸಿತದ ಪಕ್ರರಣಗಳಾಗಿವೆ ಎಂದು ಮಂಡಳಿಯ ಸಮೀಕ್ಷಾ ವರದಿ ತಿಳಿಸಿರುವದಾಗಿ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಎಂ. ಕಾವೇರಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.2018-19ರ ಮಳೆಗಾಲದ ಬಳಿಕದ ಸಮೀಕ್ಷೆಯಲ್ಲಿ ಕಾಫಿ ಉತ್ಪಾದನಾ ಪ್ರಮಾಣ 3,19,500 ಟನ್‍ಗಳಿಗೆ ಇಳಿದಿದೆ. ಈ ಪೈಕಿ ಅರೇಬಿಕಾ 15,500 ಮೆ. ಟನ್ (13.64%) ಕಡಿಮೆ ಹಾಗೂ ರೋಬಸ್ಟಾ 45,500 ಮೆ. ಟನ್ (16.85%) ಕಡಿಮೆಯಾಗಿದೆ. ಆದರೆ, 2017-18ರ ಅಂತಿಮ ಫಸಲಿನ ಪ್ರಮಾಣವಾದ 3,16,000 ಮೆ. ಟನ್‍ಗೆ ಹೋಲಿಸಿದರೆ ಈಗಿನ ಸಮೀಕ್ಷೆಯಲ್ಲಿ 3,500 ಮೆ. ಟನ್ (1.11%) ಅಧಿಕ ಪ್ರಮಾಣ ಕಂಡು ಬರುತ್ತದೆ.

ಕರ್ನಾಟಕದಲ್ಲಿ ಇದೀಗ ಕೈಗೊಂಡ ಸಮೀಕ್ಷಾ ಅಂದಾಜಿನ ಅನ್ವಯ 2,19,550 ಟನ್ ಸಿಗಬಹು ದಾಗಿದ್ದು ಮಳೆಯಿಂದಾಗಿ 48,250 ಟನ್ (ಶೇ. 18.02) ಪ್ರಮಾಣ ಕಡಿಮೆಯಾಗಿದೆ. ಈ ಪೈಕಿ ಕಳೆದ ಆಗಸ್ಟ್‍ನಲ್ಲಿ ಮಳೆ, ಭೂ ಕುಸಿತ ಹಾಗೂ ಪ್ರವಾಹದಿಂದಾಗಿ ಕೊಡಗಿನಲ್ಲಿ 25,020 ಟನ್ (ಅರೇಬಿಕಾ 4,750 ಟನ್ ಹಾಗೂ ರೋಬಸ್ಟಾ 20,270 ಮೆ. ಟನ್) ಕಡಿಮೆಯಾಗಿದೆ. ಚಿಕ್ಕ ಮಗಳೂರುವಿನಲ್ಲಿ 17,250 (ಅರೇಬಿಕಾ 6,550 ಹಾಗೂ ರೋಬಸ್ಟಾ 10,700 ಟನ್) ಹಾಗೂ ಹಾಸನದಲ್ಲಿ 5,980 ಮೆ. ಟನ್ (ಅರೇಬಿಕಾ 1,900 ಟನ್ ಹಾಗೂ ರೋಬಸ್ಟಾ 4080 ಮೆ.ಟನ್) ಪ್ರಮಾಣ ಕಡಿಮೆಯಾಗಲಿದೆ.

ಕೇರಳದಲ್ಲಿ ಹೂ ಸಮೀಕ್ಷೆಯನ್ವಯ 80,650 ಮೆ.ಟನ್ ಎಂದು ಅಂದಾಜಿಸಲಾಗಿದ್ದು ಅಲ್ಲಿ ಈ ವರ್ಷದ ಭೀಕರ ಮಳೆಗಾಲದ ಬಳಿಕದ ಸಮೀಕ್ಷೆಯಲ್ಲಿ ಈ ಪ್ರಮಾಣ 70,435 ಟನ್‍ಗೆ ಇಳಿದಿದೆ. ಮುಖ್ಯವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಕಾಫಿ ಉತ್ಪಾದನೆ ಕ್ಷೀಣಗೊಂಡಿರುವದು ಸ್ಪಷ್ಟವಾಗಿದೆ. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಶೆ. 46 ರಿಂದ ಇನ್ನು ಕೆಲವೆಡೆ ಶೇ. 98 ರಷ್ಟು ವಾಡಿಕೆ ಪ್ರಮಾಣಕ್ಕಿಂತ ಅಧಿಕ ಮಳೆಬಂದುದೇ ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರಲು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.