ಮಡಿಕೇರಿ, ಜ. 29: ಐತಿಹಾಸಿಕ ಹಿನ್ನೆಲೆಯುಳ್ಳ ರಾಜರ ಅರಮನೆ (ಕೋಟೆ) ಕುಸಿಯತೊಡಗಿದೆ. ಈಗಾಗಲೇ ಶಿಥಿಲಗೊಂಡಿರುವ ಕೋಟೆಯ ಒಂದೊಂದೇ ಭಾಗಗಳು ಕಳಚಿಕೊಳ್ಳುತ್ತಿವೆ. ಗೋಡೆಗಳಲೆಲ್ಲ ಗಿಡ-ಗಂಟಿಗಳು ಬೆಳೆದಿದ್ದು ಹೆಂಚುಗಳು ಜಾರಿ ನೆಲ ಸೇರುತ್ತಿವೆ.ಇತಿಹಾಸ ಸಾರುವ ರಾಜರ ಅರಮನೆ ಇದೀಗ ಜಿಲ್ಲಾ ಪಂಚಾಯತ್ ಕಚೇರಿಯಾಗಿರುವ ಕೋಟೆ ಸಂಪೂರ್ಣ ಶಿಥಿಲಗೊಂಡಿದೆ. ಕಳೆದೆರಡು ವರ್ಷದ ಹಿಂದಿನ ಮಳೆಗಾಲದಲ್ಲಿ ಕೋಟೆಯ ಪ್ರಮುಖ ಭಾಗವಾದ ಹಳೇ ವಿಧಾನಸಭಾಂಗಣದ ಮೇಲ್ಚಾವಣಿಯ ಹೆಂಚುಗಳು ಜಾರಿದ್ದವು. ಕಳೆದ ಮಳೆಗೆ ಮತ್ತೊಂದಿಷ್ಟು ಜಾರಿ ಹಾಗೆಯೇ ನಿಂತಿದ್ದವು. ಸಂಬಂಧಪಟ್ಟ ಪ್ರಾಚ್ಯವಸ್ತು ಇಲಾಖೆ ಅದನ್ನು ತೆರವುಗೊಳಿಸುವ ಗೋಜಿಗೂ ಹೋಗಿರಲಿಲ್ಲ. ಇದೀಗ ಇಂದು ಆ ಹೆಂಚುಗಳು ಸಹಿತ ಮರದ ಪಟ್ಟಿಗಳ ಸಹಿತ ನೆಲಕ್ಕೆ ಜಾರಿದೆ. ಇಂದು ಸಂಜೆ 3.45ರ ವೇಳೆಗೆ ಇದ್ದಕ್ಕಿದ್ದಂತೆ ಹೆಂಚುಗಳು ಜಾರಿಬಿದ್ದಿವೆ. ಗಿಜಿಗುಡುತ್ತಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಚೇರಿಗೆ ತೆರಳುವ ಭಾಗದಲ್ಲಿ ಹೆಂಚುಗಳು ಬಿದ್ದಿವೆ. ಅದೃಷ್ಟವಶಾತ್ ಆ ವೇಳೆಗೆ ಯಾರೂ ಅತ್ತ ಸುಳಿಯದ್ದರಿಂದ ಆಪಾಯ ತಪ್ಪಿದಂತಾಗಿದೆ. ಇಲ್ಲವಾದಲ್ಲಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು.
ಇದೀಗ ಮುಖ್ಯ ದ್ವಾರದಿಂದ ಕಚೇರಿಯೊಳಗಡೆ ಯಾರೂ ತೆರಳದಂತೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸಂಜೆ ಕೆಲಸ ಬಿಡುವ ಸಮಯವಾಗಿದಿದ್ದರೆ ಅನಾಹುತ ಸಂಭವಿಸಲಿತ್ತು. ಸದ್ಯದ ಮಟ್ಟಿಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಅನಾಹುತ ಸಂಭವಿಸದೆ ಕೋಟೆಯ ದುರಸ್ತಿಗೆ ಸಂಬಂಧಿಸಿದ ಇಲಾಖೆ ಕೈ ಹಾಕುವದಿಲ್ಲ ಎಂಬಂತಿದೆ. ಸಾರ್ವಜನಿಕರೇ ಕೋಟೆ ಆವರಣದಲ್ಲಿ ಸುಳಿದಾಡುವಾಗ ಎಚ್ಚರವಹಿಸಿಕೊಳ್ಳುವದೊಳಿತು..
- ಸಂತೋಷ್