ಮಡಿಕೇರಿ, ಜ. 29: ಬಸ್ಸೊಂದು ಅವಘಡಕ್ಕೀಡಾಗಿ ಬಸ್‍ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಡಿಕೇರಿಗೆ ಪ್ರವಾಸಕ್ಕೆ ಮಕ್ಕಳನ್ನು ಕರೆತಂದಿದ್ದ ಖಾಸಗಿ ಬಸ್‍ವೊಂದು ಮಡಿಕೇರಿಯಿಂದ ಹಿಂತಿರುಗುವ ವೇಳೆ ಚೈನ್‍ಗೇಟ್ ಬಳಿ ತಲಪುತ್ತಿದ್ದಂತೆ ಎದುರಿನಿಂದ ಬಂದ ವಾಹನವೊಂದಕ್ಕೆ ಸ್ಥಳಾವಕಾಶ ನೀಡಲು ಮುಂದಾದ ಸಂದರ್ಭ ಬಸ್ ತಂಗುದಾಣಕ್ಕೆ ಡಿಕ್ಕಿಯಾಗಿದೆ.ಪರಿಣಾಮ ಬಸ್‍ನ ಗಾಜು ಸಂಪೂರ್ಣ ಒಡೆದಿದ್ದು, ಗಾಜಿನ ಚೂರು ತಗುಲಿ ಬಸ್‍ನಲ್ಲಿದ್ದ ದರ್ಶನ್ (15) ಮೋಹನ್ (14) ಎಂಬ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲ್ಪಟ್ಟಿದ್ದಾರೆ. ಮಡಿಕೇರಿ ನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಕ್ರಮಕೈಗೊಂಡಿದ್ದಾರೆ.