ಕುಶಾಲನಗರ, ಜ. 28: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯ್ತಿ ಅಧ್ಯಕ್ಷೆ ಕೆ.ಎಸ್.ಭಾರತಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಗುಡ್ಡೆಹೊಸೂರು ವೃತ್ತಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿಯ ಹೆಸರಿಡಲು ಸಭೆ ನಿರ್ಣಯ ಕೈಗೊಂಡಿತು. ಗ್ರಾಮದ ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ಕಾರ್ಯಕರ್ತರು ಗುಡ್ಡೆಹೊಸೂರು ವೃತ್ತದಲ್ಲಿ ಶ್ರೀಗಳ ಹೆಸರನ್ನು ಇಡುವ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿಯನ್ನು ಲಿಖಿತವಾಗಿ ಕೋರಿಕೊಂಡ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚಿಸಿದ ಅಧ್ಯಕ್ಷೆ ಭಾರತಿ,
ಧರ್ಮಾತೀತವಾದ ಮತ್ತು ಜಾತ್ಯಾತೀತವಾದ ಸೇವೆಯನ್ನು ಸಮಾಜಕ್ಕೆ ನೀಡಿದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹೆಸರನ್ನು ಪಂಚಾಯತಿ ಬಳಿಯಿರುವ ವೃತ್ತಕ್ಕೆ ನಾಮಕರಣ ಮಾಡುವ ಮೂಲಕ ನಾವೆಲ್ಲರೂ ಕೃತಾರ್ಥ ರಾಗಬೇಕು ಎಂದರು.
ಸಭೆಯಲ್ಲಿ ನೆರೆದಿದ್ದ ಸರ್ವ ಸದಸ್ಯರು ಈ ನಿರ್ಣಯವನ್ನು ಅಂಗೀಕರಿಸಿ ಶ್ರೀಗಳ ಹೆಸರನ್ನು ಇಡುವಂತೆ ನಿರ್ಣಯಿಸಿದರು. ಗ್ರಾಮ ಪಂಚಾಯಿತಿಯ ಹಲವು ಕಡೆ ಬಹುತೇಕ ಗ್ರಾಹಕರು ನೀರಿನ ಕರವನ್ನು ಪಾವತಿಸದೆ ಐದಾರು ಸಾವಿರ ರೂಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಈ ಬಗ್ಗೆ ಪಂಚಾಯತಿ ಸದಸ್ಯರು ವಾಟರ್ ಮ್ಯಾನ್‍ಗಳೊಂದಿಗೆ ಸಹಕರಿಸಿ ಪಂಚಾಯಿತಿಗೆ ಆದಾಯ ವನ್ನು ತಂದು ಕೊಡಬೇಕೆಂದು ಅಧ್ಯಕ್ಷೆ ಭಾರತಿ ಮತ್ತು ಪಿಡಿಒ ಶಾಮ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ, ಸಭೆಯೊಳಗೆ ವಾಟರ್‍ಮ್ಯಾನ್ ಗಳನ್ನು ಆಹ್ವಾನಿಸಿ ಅವರಿಂದ ಮಾಹಿತಿ ಪಡೆದ ಬಳಿಕ ಸಾವಿರಾರು ರೂ.ಗಳ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಂದ ಕೂಡಲೇ ಬಾಕಿ ಇರುವ ಹಣವನ್ನು ಕಟ್ಟಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಸಂಪರ್ಕವನ್ನು ಕಡಿತಗೊಳಿಸುವಂತೆ ವಾಟರ್ ಮ್ಯಾನ್‍ಗಳಿಗೆ ಸೂಚಿಸಿದರು.
ವಾಟರ್ ಮ್ಯಾನ್ ಬಳಿ ಉದ್ಧಟತನ ತೋರುವ ಗ್ರಾಹಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆಯೂ ಶಾಮ್ ಎಚ್ಚರಿಸಿದರು. ಪಂಚಾಯತಿಯ ಕೆಲವು ಅಂಗನವಾಡಿಗಳಲ್ಲಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರು ಅಂಗನವಾಡಿ ಕೇಂದ್ರಗಳನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವ ಬಗ್ಗೆ ದೂರುಗಳಿರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚೆ ನಡೆಯಿತು.
ಈಗಾಗಲೇ ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನೀರಿನ ಮಿತವ್ಯಯ ಮಾಡುವ ಕುರಿತು ಗ್ರಾಹಕರಿಗೆ ನೀರಿನ ಬಳಕೆಯ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪಿಡಿಒ ಹೇಳಿದರು.
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಗಂಗಾ, ಪಾರ್ವತಿ ಹೇಮಾವತಿ, ಕವಿತಾ, ಪ್ರಸನ್ನ, ನಾರಾಯಣ, ಭೀಮಯ್ಯ, ಗುಡ್ಡೆಮನೆ ರವಿ ಪುಷ್ಪ, ನಾಗೇಶ್, ಪಂಚಾಯಿತಿ ಕಾರ್ಯದರ್ಶಿ ನಂಜುಂಡಸ್ವಾಮಿ ಇದ್ದರು.