ಭಾಗಮಂಡಲ, ಜ. 29: ಹೆರವನಾಡು ಗ್ರಾಮದ ಅರಂಬೂರು ಮನೆಯ ಎ.ಕೆ. ಕಮಲಾಕ್ಷಿ ವಿವಿಧ ಕ್ರೀಡಾ ಸ್ಪರ್ಧೆ ಗಳಲ್ಲಿ ಸಾಧನೆ ಮಾಡಿದ್ದಾರೆ. ರಾಜ್ಯ ಮಟ್ಟದ ಹಾಫ್ ಮೆರಥಾನ್ ಸ್ಪರ್ಧೆ ಸುಳ್ಯದಲ್ಲಿ ಜರುಗಿದ್ದು ಮೂರು ಕಿ.ಮೀ. ಅಂತರದ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
1991-92ರಲ್ಲಿ ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ, 400ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ 1500 ಮೀ. ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಅದೇ ವರ್ಷ ಮೈಸೂರು ವಿಭಾಗಮಟ್ಟದ 400 ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ, ಹಾಗೂ 800 ಮೀಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರ ಕ್ರೀಡಾ ಸಾಧನೆಗಾಗಿ ಕ್ರೀಡಾಗ್ರಣಿ ಪ್ರಶಸ್ತಿ ಲಭಿಸಿದೆ. ವಿವಿಧ ವಿಭಾಗಗಳಲ್ಲಿ ಕ್ರೀಡಾಸ್ಪರ್ಧೆಗಳಲ್ಲಿ ಗೆಲವು ಸಾಧಿಸಿದ ಇವರು ಕುಶಲಕುಮಾರ್ ಅವರ ಪತ್ನಿ.