ಸುಂಟಿಕೊಪ್ಪ, ಜ. 29: ಆಡುಗಳನ್ನು ಸಾಕಿ ಜೀವನೋಪಾಯ ಸಾಗಿಸುತ್ತಿದ್ದ ಬಡ ವ್ಯಕ್ತಿಯ ಜೀವನಕ್ಕೆ ದುರುಳರು ಕೊಳ್ಳಿಯಿಟ್ಟ ಘಟನೆ ನಡೆದಿದೆ.
ಕೆದಕಲ್ ಗ್ರಾಮ ಪಂಚಾಯಿತಿಯ 7ನೇ ಮೈಲು ನಿವಾಸಿ ಅಬೂಬಕರ್ ಎಂಬವರು ಕಳೆದ ಹಲವಾರು ವರ್ಷಗಳಿಂದ ಆಡುಗಳನ್ನು ಮೇಯಿಸಿ ಅದನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಮನೆಯ ಒತ್ತಿನಲ್ಲಿ ಆಡುಗಳಿಗೆ ಕೊಟ್ಟಿಗೆ ನಿರ್ಮಿಸಿಕೊಂಡಿದ್ದರು. ಕಳೆದ ಆಗಸ್ಟ್‍ನ ಮಳೆಗೆ 7ನೇ ಮೈಲಿನ ಹಲವಾರು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ಆ ಸಂದರ್ಭವನ್ನು ಉಪಯೋಗಿಸಿದ ದುರುಳರು ಇವರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 1 ಗಂಡು ಹಾಗೂ 1 ಗರ್ಭಧರಿಸಿದ ಹೆಣ್ಣು ಆಡನ್ನು ಅಪಹರಿಸಿದ್ದರು. ಈ ಬಗ್ಗೆ ಅಬೂಬಕ್ಕರ್ ಪೊಲೀಸರಿಗೆ ದೂರು ನೀಡಿದ್ದರೂ ಕಳ್ಳ ಪತ್ತೆಯಾಗಲಿಲ್ಲ.
ಮತ್ತೆ ಅಘಾತ: ಈಗ ತಾ. 27 ರಂದು ಮಧ್ಯರಾತ್ರಿ 2 ರಿಂದ 3 ಗಂಟೆಯ ಅಂತರದಲ್ಲಿ ಅಬೂಬಕರ್ ಅವರ 2 ಗರ್ಭಧರಿಸಿದ ಆಡುಗಳನ್ನು ಕಳ್ಳರು ಅಪಹರಿಸಿ ಪರಾರಿಯಾಗಿದ್ದಾರೆ ಇದರಿಂದ ಜೀವನೋಪಾಯಕ್ಕಾಗಿ ಆಡುಗಳನ್ನು ಸಾಕಿ ಬದುಕುತ್ತಿದ್ದ ಅಬೂಬಕರ್ ಅವರು ಅತಂತ್ರರಾಗಿದ್ದಾರೆ.
ಇದರಿಂದ ಒಟ್ಟಾರೆ ರೂ. 1 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.