ಮಡಿಕೇರಿ, ಜ. 29: ಬೆಂಗಳೂರಿನ ಕೆ. ಪಿ. ರಸ್ತೆಯ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರ ಪೈಕಿ 10 ಜನರಿಗೆ ತಲಾ 10 ಸಾವಿರದಂತೆ 1 ಲಕ್ಷ ರೂ.ಗಳನ್ನು ವಿತರಿಸಲಾಯಿತು.

ಕೆ.ಪಿ.ರೋಡ್ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಮಡಿಕೇರಿಗೆ ಬಂದ ಸದಸ್ಯರ ತಂಡ 10 ಜನರಿಗೆ ತಲಾ 10 ಸಾವಿರ ರೂ.ಗಳನ್ನು ವಿತರಿಸಿತು.

ಮಡಿಕೇರಿ ಸಂಪಿಗೆಕಟ್ಟೆಯ ಟಿ.ಎನ್. ನಳಿನಿ, ಚಾಮುಂಡೇಶ್ವರಿ ನಗರದ ಕೆ.ಪಾರ್ವತಿ, ಕಳಕೇರಿ ನಿಡುಗಣೆಯ ಪ್ರತಿಭಾ ಎ.ಶೆಟ್ಟಿ, ಬಿ.ಎನ್. ಪದ್ಮ, ಎರಡನೇ ಮೊಣ್ಣಂಗೇರಿಯ ಎಂ.ಎಂ. ಲೋಕೇಶ್, ಎಸ್.ಬಿ. ಮುತ್ತಪ್ಪ, ಮಕ್ಕಂದೂರಿನ ಎಂ. ಕೆ. ಸಾವಿತ್ರಿ, ಸುಬ್ಬಂಡ ಸಿ. ಕುಶಾಲಪ್ಪ, ಕೆ. ಪಿ. ಜಗದೀಪ್, ಮೇಘತ್ತಾಳು ಗ್ರಾಮದ ಟಿ.ಟಿ.ಪೂವಣ್ಣ ಅವರಿಗೆ ಆರ್ಥಿಕ ನೆರವು ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ದೇವಣೀರ ತಿಲಕ್, ಕಳೆದ ನಾಲ್ಕು ತಿಂಗಳಿನಿಂದ ಸತತವಾಗಿ ಕೊಡಗಿಗೆ ಭೇಟಿ ನೀಡಿ ಪ್ರಕೃತಿ ವಿಕೋಪ ಸಂತ್ರಸ್ತರಿಗೆ 4 ಲಕ್ಷ ರೂ.ಗಳಷ್ಟು ಪರಿಹಾರವನ್ನು ಈವರೆಗೆ ನೀಡಿರುವ ಕೆ.ಪಿ.ರೋಡ್ ಔಷಧಿ ವ್ಯಾಪಾರಸ್ಥರ ಸಂಘದ ಕಾರ್ಯ ಶ್ಲಾಘನೀಯ. ಇಂಥ ಮಾನವೀಯ ಗುಣದಿಂದಾಗಿಯೇ ಕೊಡಗಿನ ಸಂತ್ರಸ್ತರು ನೆಮ್ಮದಿಯ ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ, ಜಿಲ್ಲಾ ಜಾನಪದ ಪರಿಷತ್ ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವಸಂತ್ ಹಾಜರಿದ್ದರು.