ಗೋಣಿಕೊಪ್ಪ ವರದಿ, ಜ. 29: ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆಗೆ ಕೆಲವು ವೈದ್ಯರುಗಳು ಇಂತಿಷ್ಟು ಹಣ ನೀಡಬೇಕು ಎಂದು ನಿಗದಿ ಮಾಡಿದ್ದಾರೆ ಎಂಬ ಗಂಭೀರ ಆರೋಪ ವಿರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು.ತಾ. ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಉಪಾಧ್ಯಕ್ಷ ನೆಲ್ಲೀರ ಚಲನ್ ಆರೋಪಕ್ಕೆ ಬಹುತೇಕ ಸದಸ್ಯರು ಬೆಂಬಲ ವ್ಯಕ್ತಪಡಿಸಿ ಬಡರೋಗಿಗಳು ಲಂಚ ನೀಡಲಾಗದೆ ತೊಂದರೆಗೆ ಸಿಲುಕಿದ್ದಾರೆ ಎಂದರು.ಸರ್ಜರಿಗೆ ಕನಿಷ್ಟ 7-8 ಸಾವಿರ ಪಡೆಯುತ್ತಿರುವ ಸ್ಪಷ್ಠ ಮಾಹಿತಿ ಇದೆ. ಬಡ ವರ್ಗದವರಿಂದ ಹಣ ಕೀಳುವ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತಾಗಬೇಕು. ಇಂತಹ ಸರ್ಜರಿಗೆ ಇಂತಿಷ್ಟೆ ಎಂದು ಹಣ ನಿಗದಿ ಮಾಡಿರುವದರಿಂದ ಬಡವರ್ಗಕ್ಕೆ ನಷ್ಟವಾಗುತ್ತಿದೆ ಎಂದು ಸದಸ್ಯರು ನೋವು ಹಂಚಿಕೊಂಡರು.

ಹಣ ನೀಡಲಾಗದೆ ರೋಗಿಗಳು ರೋಗದಿಂದ ಗುಣಮುಖರಾಗಲು ಆಗುತ್ತಿಲ್ಲ. ಲಂಚ ಪಡೆಯುವ ವೈದ್ಯರ ವಿರುದ್ಧ ಕ್ರÀಮಕೈಗೊಳ್ಳಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿಗಳನ್ನು ಸದಸ್ಯರು ಒತ್ತಾಯಿಸಿದರು.

ತಾಲೂಕಿನಲ್ಲಿರುವ ಗೋಣಿಕೊಪ್ಪ, ಪಾಲಿಬೆಟ್ಟ ಹಾಗೂ ಕುಟ್ಟ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ಆರೋಗ್ಯ ರಕ್ಷಾ ಸಮಿತಿ ನವೀಕರಣಗೊಳ್ಳದೆ ಕಾರ್ಯನಿರ್ವಹಿಸುತ್ತಿದೆ. ಅಧಿಕೃತವಾಗಿ ನವೀಕರಣ ಮಾಡಿಕೊಂಡು ಮುಂದುವರಿಯಲು ಸೂಚಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ನವೀಕರಣಗೊಳ್ಳದೆ ಹಣಕಾಸು ನಿರ್ವಹಣೆ ಮಾಡುವ ಅಧಿಕಾರವಿಲ್ಲದಿದ್ದರೂ ಸಮಿತಿ ಕಾರ್ಯನಿರ್ವಹಿಸುತ್ತಿರುವದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಮಂಗಗಳ ಮೇಲಿರುವ ಉಣ್ಣಿ ಎಂಬ ಕೀಟದಿಂದ ಹರಡುವ ಮಂಗನ ಕಾಯಿಲೆ ಬಗ್ಗೆ ಆತಂಕ ಬೇಡ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಹೇಳಿದರು.

ನೆರೆ ಜಿಲ್ಲೆ ವೈನಾಡ್ ಹಾಗೂ ಹೆಚ್.ಡಿ. ಕೋಟೆ ತಾಲೂಕಿನಲ್ಲಿ ಮಂಗನ ಕಾಯಿಲೆ ಇರುವ ಬಗ್ಗೆ ಮಾಹಿತಿ ಇದೆ. ಹೆಚ್.ಡಿ. ಕೋಟೆಯಲ್ಲಿ ಮಂಗನಕಾಯಿಲೆ ಇಲ್ಲ ಎಂದು ಮೈಸೂರು ಡಿಹೆಚ್‍ಒ ಸ್ಪಷ್ಟ ಪಡಿಸಿದ್ದಾರೆ. ವಯನಾಡು ಭಾಗದಿಂದ ತಾಲೂಕಿಗೆ ಮಂಗನ ಕಾಯಿಲೆ ಹರಡಿರುವ ಬಗ್ಗೆ ಆತಂಕ ಬೇಡ. ಅಂತಹ ಪ್ರಕರಣ ದಾಖಲಾಗಿಲ್ಲ. ಮಂಗನ

(ಮೊದಲ ಪುಟದಿಂದ) ಕಾಯಿಲೆಗೆ ಒಳಗಾಗಿರುವ ಮಂಗಗಳ ಮೇಲಿರುವ ಉಣ್ಣಿ ಕಚ್ಚಿದರೆ ಈ ರೋಗ ಹರಡುತ್ತದೆ. ಇಂತಹ ಆತಂಕ ಬೇಡ ಎಂದರು.

ಮೈಸೂರು-ಗೋಣಿಕೊಪ್ಪ ಹೆದ್ದಾರಿಯಲ್ಲಿರುವ ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಬೇಕು ಎಂದು ಉಚ್ಚ ನ್ಯಾಯಾಲದಲ್ಲಿ ದಾವೆ ಹೂಡಿರುವವದನ್ನು ಸಭೆಯಲ್ಲಿ ಖಂಡಿಸಲಾಯಿತು. ದಿನಂಪ್ರತಿ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಚಲಿಸಬೇಕಿದೆ. ಜನರಿಗೆ ಉಪಯುಕ್ತವಾಗಿರುವ ಇಂತಹ ಮಾರ್ಗವನ್ನು ವನ್ಯಜೀವಿಗಳ ರಕ್ಷಣೆಗಾಗಿ ರಾತ್ರಿ ನಿಷೇಧ ಮಾಡಬೇಕು ಎಂದು ಒತ್ತಾಯಿಸಿ ದಾವೆ ಹೂಡಿರುವದು ಸರಿಯಲ್ಲ. ಈ ಬಗ್ಗೆ ಸರ್ಕಾರವೇ ಉನ್ನತ ಮಟ್ಟದಲ್ಲಿ ವಾದ ಮಂಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಲು ಸಭೆ ನಿರ್ಧರಿಸಿತು. ದಾವೆ ಹೂಡಿರುವ ಕ್ರಮದ ಬಗ್ಗೆ ಖಂಡನಾ ನಿರ್ಣಯ ಮಾಡಲಾಯಿತು.

ಕುಡಿಯುವ ನೀರು ಅಭಾವ ಉಲ್ಬಣಿಸದಂತೆ ತುರ್ತು ಕ್ರಮಕೈಗೊಳ್ಳಲು ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಈ ಸಂದÀರ್ಭ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಬಹುತೇಕ ಜಾಗಗಳಲ್ಲಿ ಬೋರ್‍ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದಾಗಿ ಹಿನೆÀ್ನಡೆಯಾಗುತ್ತಿದೆ. ಶ್ರೀಮಂಗಲ, ಕೊಟ್ಟಗೇರಿ, ಗೋಣಿಕೊಪ್ಪ ಕಾವೇರಿ ಹಿಲ್ಸ್ ಬಡಾವಣೆ ಭಾಗದಲ್ಲಿ ನೀರಿನ ಅಭಾವವಿರುವ ಬಗ್ಗೆ ದೂರುಗಳಿವೆ. ಬರ ಪರಿಹಾರ ಅನುದಾನದಲ್ಲಿ ಹಣವಿಲ್ಲದ ಕಾರಣ ಪ್ರತ್ಯೇಕವಾಗಿ ಟ್ಯಾಂಕ್‍ಗಳಲ್ಲಿ ನೀರು ಹಂಚಿಕೆ ಮಾಡಲು ಅನುದಾನವಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗೆ 25 ಲಕ್ಷ ಅನುದಾನವಿದ್ದು, ಹಂತ ಹಂತವಾಗಿ ಕಾರ್ಯ ನಡೆಯುತ್ತಿದೆ ಎಂದರು.

ಸೀಮೆಎಣ್ಣೆ ರಹಿತ ಪಡಿತರ ಚೀಟಿ ಇರುವ ಫಲಾನುಭವಿಗಳು ಸೀಮೆಎಣ್ಣೆ ಪಡೆಯಲು ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ವಿಶೇಷ ಅರ್ಜಿ ಸಲ್ಲಿಸಿ 1 ಲೀಟರ್ ಸೀಮೆಎಣ್ಣೆ ಪಡೆಯಲು ಅವಕಾಶವಿದೆ ಎಂದು ಆಹಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಎಪಿಎಲ್ ಪಡಿತರದಾರರಿಗೂ ದಾಸ್ತಾನು ಪ್ರಮಾಣಕ್ಕೆ ಅನುಗುಣವಾಗಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಕೆಲವೊಮ್ಮೆ ದಾಸ್ತಾನು ಕೊರತೆಯಿಂದ ವಿತರಣೆ ಮಾಡಲಾಗುತ್ತಿಲ್ಲ ಎಂದರು.

ಹೆಗ್ಗುರುತು ತಂತ್ರಾಶದ ಮೂಲಕ ವಿತರಣೆಯಾಗುತ್ತಿರುವ ಪಡಿತರ ಪಡೆಯಲು ತೊಂದರೆಯಾಗುತ್ತಿದೆ ಎಂದು ಸದಸ್ಯರು ಹೇಳಿದರು. ತಾಂತ್ರಿಕ ತೊಂದರೆಯಿಂದಾಗಿ ಪಡಿತರದಿಂದ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ. ತಾಂತ್ರಿಕ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿದರು.

ಹೈಸೊಡ್ಲೂರು ಗ್ರಾಮದಲ್ಲಿ ಒತ್ತುವರಿ ತೆರವುಗೊಂಡು ತಾಲೂಕು ಇಒ ಹೆಸರಿಗೆ ದಾಖಲಾಗಿರುವ 1 ಏಕರೆ ಜಾಗದಲ್ಲಿ ನಿವೇಶನ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಲ್ಲಿ ಅಕ್ರಮವಾಗಿ ಆಶ್ರಯ ಪಡೆದವರನ್ನು ತೆರವುಗೊಳಿಸಲು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು. ಸ್ಥಳೀಯ ನಿವೇಶನ ರಹಿತರಿಗೆ ನೀಡಲು ಅವಕಾಶವಿದೆ. ಅಕ್ರಮವಾಗಿ ಆಶ್ರಯ ಪಡೆದವರನ್ನು ತೆರವು ಮಾಡಲು ನಿರ್ಧರಿಸಲಾಯಿತು.

ಕದನೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ಜೋಡಿಸಿರುವ ಪೈಪ್‍ಗಳನ್ನು ಕತ್ತರಿಸುವ ಮೂಲಕ ನೀರು ಸರಬರಾಜು ಮಾಡಲು ಕೆಲವರು ತೊಂದರೆ ಮಾಡುತ್ತಿದ್ದಾರೆ ಎಂದು ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿ ಮಾಹಿತಿ ನೀಡಿದರು. ಈ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ. ಸಾರ್ವಜನಿಕರಿಗೆ ನೀರು ಒದಗಿಸುವ ಸದ್ದುದ್ದೇಶದಿಂದ ಪೈಪ್‍ಲೈನ್ ಅಳವಡಿಸಲಾಗಿದೆ. ಆದರೆ, ಪೈಪ್‍ಗಳನ್ನು ಕತ್ತರಿಸಿ ಸರಬರಾಜಿಗೆ ತೊಡಕುಂಟು ಮಾಡುತ್ತಿದ್ದಾರೆ ಎಂದರು.

ಸಭೆಯಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಜೆನ್ನಿಸ್, ಇಒ ಜಯಣ್ಣ ಉಪಸ್ಥಿತರಿದ್ದರು.

ಸುದ್ದಿಪುತ್ರ / ಎನ್.ಎನ್. ದಿನೇಶ್