ಮಡಿಕೇರಿ, ಜ. 27: 2019ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್-ವಿದ್ಯುನ್ಮಾನ ಮತಯಂತ್ರ) ವನ್ನು ಬಳಸದೇ ಬ್ಯಾಲೆಟ್ ಪೇಪರ್ (ಮತಪತ್ರ)ಗಳನ್ನು ಬಳಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಬಹುಜನ ಸಮಾಜ ಪಕ್ಷ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತು.
ಲೋಕಸಭಾ ಚುನಾವಣೆಯಲ್ಲಿ ನ್ಯಾಯಯುತ ಫಲಿತಾಂಶವನ್ನು ನೀಡಲು ಮತಪತ್ರಗಳಿಂದ ಮಾತ್ರ ಸಾಧ್ಯವೆಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಈ ಸಂದರ್ಭ ತಿಳಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಒಕ್ಕೂಟ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಭಾರತೀಯರಿಗೆ ಆಶ್ಚರ್ಯ ಮತ್ತು ಒಂದು ಕಡೆ ಅನುಮಾನದಿಂದಲೇ ಇದನ್ನು ಒಪ್ಪಿಕೊಂಡರು. 2014ರ ಲೋಕಸಭಾ ಚುನಾವಣೆ ಮುಗಿದ ಮೇಲೆ ನಡೆದಂತಹ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಕೂಡ ಭಾರತೀಯ ರೆಲ್ಲರನ್ನು ದಿಗ್ಭ್ರಾಂತಗೊಳಿಸಿದೆ ಹಾಗೂ 2014ರ ಚುನಾವಣೆಯ ಮೇಲಿನ ಅನುಮಾನಗಳಿಗೆ ಪುಷ್ಟಿ ದೊರೆತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.
2017ರಲ್ಲಿ ನಡೆದ ಉತ್ತರ ಪ್ರದೇಶ ರಾಜ್ಯದ ಚುನಾವಣೆಯು ಇವಿಎಂ ನಿಂದಲೇ ಬಿಜೆಪಿ ಗೆಲ್ಲುತ್ತಿದೆ ಎಂಬದನ್ನು ಸಾಬೀತು ಪಡಿಸಿತ್ತು. ಇದಕ್ಕೆ ಪೂರಕವಾಗಿ ಅಮೇರಿಕಾದ ಸೈಬರ್ ಪರಿಣಿತ ಸೈಯದ್ ಶುಖಾರವರು ಲಂಡನ್‍ನಲ್ಲಿ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್-ವಿದ್ಯುನ್ಮಾನ ಮತಯಂತ್ರ)ವನ್ನು ಹ್ಯಾಕ್ ಮಾಡಬಹುದು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್-ವಿದ್ಯುನ್ಮಾನ ಮತಯಂತ್ರ)ವನ್ನು ಹ್ಯಾಕ್ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ ಎಂದು ಮೋಹನ್ ಮೌರ್ಯ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾಯವಾಗಿರುವ ಮತದಾನವನ್ನೇ ಕಳ್ಳತನ ಮಾಡುವದು ಆತಂಕಕಾರಿ ಬೆಳವಣಿಗೆಯಾಗಿದೆ. ಇವಿಎಂ ಯಂತ್ರಗಳ ಮೇಲಿನ ಅನುಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವದರಿಂದ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರಕ್ಕೆ ಬದಲು ಮತಪತ್ರಗಳನ್ನೇ ಬಳಸಬೇಕೆಂದು ಚುನಾವಣಾ ಆಯೋಗವನ್ನು ಒತ್ತಾಯಿಸುವದಾಗಿ ಅವರು ಹೇಳಿದ್ದಾರೆ.
ಪಕ್ಷದ ತಾಲೂಕು ಅಧ್ಯಕ್ಷ ಪೂವಣ್ಣಿ, ಪ್ರಧಾನ ಕಾರ್ಯದರ್ಶಿ ಜನಾರ್ಧನ, ನಗರ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಗಣೇಶ, ಜಿಲ್ಲಾ ಖಜಾಂಚಿ ದಿಲೀಪ್ ಕುಮಾರ್, ಪ್ರಮುಖರಾದ ಹೆಚ್.ಎಸ್. ಬಸವರಾಜ್, ಬೊಟ್ಟೊಳಂಡ ದೊರೆಮಣಿ, ರಾಜಣ್ಣ ಮತ್ತಿತರರು ಈ ಸಂದರ್ಭ ಹಾಜರಿದ್ದರು.