ವೀರಾಜಪೇಟೆ, ಜ. 27: ವಿದ್ಯಾರ್ಥಿಗಳು ಎನ್.ಎಸ್.ಎಸ್. ಶಿಬಿರದಲ್ಲಿ ಪಡೆದ ನಾಯಕತ್ವದ ಉತ್ತಮ ಗುಣಗಳನ್ನು ಜೀವನದಲ್ಲಿಯು ಅಳವಡಿಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ಬಾಳುಗೋಡುವಿನ ಏಕಲವ್ಯ ಮಾದರಿ ವಸತಿ ಶಾಲಾ ಆವರಣದಲ್ಲಿ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ‘’ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಸ್ವ ಆರ್ಥಿಕ ಘಟಕದ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಮಹೇಶ್, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ದುಶ್ಚಟಗಳನ್ನು ದೂರ ಮಾಡಿ ಸಾಧನೆ ಮಾಡಬೇಕೆಂಬ ಛಲದಿಂದ ಗುರಿಯನ್ನು ಸಾಧಿಸಬೇಕು ಎಂದರು.

ತಾಲೂಕು ವೈದ್ಯಾಧಿಕಾರಿ ಹೆಚ್.ಆರ್. ಯತಿರಾಜ್ ಮಾತನಾಡಿ, ಭಾರತ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚು. ವಿದ್ಯಾರ್ಥಿಗಳಿಗೆ ಸಾಧನೆಯೇ ಪ್ರಮುಖವಾದ ಹಂತ. ಮಾದಕ ವಸ್ತುಗಳನ್ನು ಸೇವನೆ ಮಾಡಬಾರದು. ಶಿಕ್ಷಣದಲ್ಲಿ ಗುರಿ ಮುಟ್ಟಬೇಕೆಂಬ ಛಲವನ್ನು ಹೊಂದಿರಬೇಕು ಎಂದರು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೆಳ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗುವಂತೆ ಶುಭ ಹಾರೈಸಿದರು. ಏಕಲವ್ಯ ವಸತಿ ಶಾಲೆಯ ಪ್ರಬಾರ ಪ್ರಾಂಶುಪಾಲೆ ಕಾವೇರಮ್ಮ ಮಾತನಾಡಿ, ಶಿಬಿರದಲ್ಲಿ ಕಲಿತಿರುವದನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳುವಂತೆ ಹೇಳಿದರು. ಏಕಲವ್ಯ ಶಾಲೆಯ ಪ್ರಸನ್ನ ಕುಮಾರ್ ಮಾತನಾಡಿದರು. ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಎ.ಎನ್. ಸತೀಶ್‍ಕುಮಾರ್, ಬಿ.ಎಂ. ಪೊನ್ನಪ್ಪ ಉಪಸ್ಥಿತರಿದ್ದರು.

ಪ್ರಾಂಶುಪಾಲ ಟಿ.ಕೆ. ಬೋಪಯ್ಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್.ಎಸ್.ಎಸ್. ಘಟಕದ ವನಿತ್‍ಕುಮಾರ್ ಸ್ವಾಗತಿಸಿದರು. ಎಂ.ಎಸ್. ಸುವರ್ಣ ನಿರೂಪಿಸಿದರು. ಯೋಜನಾಧಿಕಾರಿ ಪ್ರೊ. ಎನ್. ಗುರುಪ್ರಸಾದ್ ವಂದಿಸಿದರು.