ಸೋಮವಾರಪೇಟೆ, ಜ. 27: ಇಲ್ಲಿನ ಜಯವೀರಮಾತೆ ದೇವಾಲಯದ 2 ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ನೂರಾರು ಕ್ರಿಶ್ಚಿಯನ್ ಬಾಂಧವರಿಂದ ಪಟ್ಟಣದಲ್ಲಿ ಮೆರವಣಿಗೆ ನಡೆಯಿತು.

ಸಂಜೆ ನೂತನ ದೇವಾಲಯದಿಂದ ಹೊರಟ ಬೆಳಗುವ ದೀಪಗಳೊಂದಿಗಿನ ಮೆರವಣಿಗೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಾಗಿತು. ಮೆರವಣಿಗೆಯುದ್ದಕ್ಕೂ ಸಿಡಿಮದ್ದುಗಳ ಪ್ರದರ್ಶನ, ದೇವರ ಸ್ಮರಣೆಗಳು ನಡೆಯಿತು.

ಕಳೆದ 22 ರಿಂದಲೇ ವಾರ್ಷಿಕೋತ್ಸವ ಸಂಬಂಧಿತ ಕಾರ್ಯಕ್ರಗಳು ನಡೆದಿದ್ದು, ಧ್ವಜಾರೋಹಣ, ಪ್ರಾರ್ಥನೆ, ಬಲಿಪೂಜೆ, ಸಿದ್ದಾಪುರದ ಧರ್ಮಕೇಂದ್ರದ ಗುರುಗಳಾದ ಪಿ. ಜೋನಾಸ್, ಆರ್ಜಿ ಧರ್ಮಕೇಂದ್ರದ ಗುರುಗಳಾದ ಜಾನ್ ಪೀಟರ್ ರೇಗೋ, ಮಳವಳ್ಳಿ ಧರ್ಮಕೇಂದ್ರದ ಗುರು ಜೋಸೆಫ್ ಮರಿ ಅವರುಗಳಿಂದ ಪ್ರಬೋಧನೆಗಳು ನಡೆದವು.

ತಾ. 25 ರಂದು ಮೈಸೂರು ಧರ್ಮಕೇಂದ್ರದ ಧರ್ಮಾಧ್ಯಕ್ಷ ಡಾ. ಕೆ.ವಿ. ವಿಲಿಯಂ ಅವರಿಂದ ನೂತನ ಧ್ವಜಸ್ತಂಭದ ಉದ್ಘಾಟನೆ, ಬಲಿಪೂಜೆ, ಸನ್ಮಾನ ಕಾರ್ಯಕ್ರಮದ ನಂತರ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಫಾ. ಟೆನ್ನಿ ಕುರಿಯನ್, ರಾಯಪ್ಪ ಸೇರಿದಂತೆ ದೇವಾಲಯ ಸಮಿತಿ ಪದಾಧಿಕಾರಿಗಳು, ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಭಾಗವಹಿಸಿದ್ದರು.